ಕಂದಹಾರ್ ವಿಮಾನ ನಿಲ್ದಾಣಕ್ಕೆ ತಾಲಿಬಾನ್ ರಾಕೆಟ್ ದಾಳಿ

ಸಾಂದರ್ಭಿಕ ಚಿತ್ರ
ಕಂದಹಾರ್,ಆ.1: ಅಫ್ಘಾನಿಸ್ತಾನದಾದ್ಯಂತ ಸರಕಾರಿ ಪಡೆಗಳು ಹಾಗೂ ತಾಲಿಬಾನ್ ಬಂಡುಕೋರರ ನಡುವೆ ಭೀಕರ ಕಾಳಗ ಮುಂದುವರಿದಿದ್ದು, ಕಂದಹಾರ್ ನ ವಿಮಾನ ನಿಲ್ದಾಣದ ಮೇಲೆ ರವಿವಾರ ರಾಕೆಟ್ ದಾಳಿ ನಡೆದಿರುವುದಾಗಿ ವರದಿಯಾಗಿದೆ.
ಅಫ್ಘಾನಿಸ್ತಾನದ ಎರಡನೆ ದೊಡ್ಡ ರಾಜಧಾನಿಯಾದ ಕಂದಹಾರ್ನಲ್ಲಿ ರವಿವಾರ ನಸುಕಿನ ವೇಳೆ ತಾಲಿಬಾನ್ ಬಂಡುಕೋರರು ಮೂರು ರಾಕೆಟ್ ಗಳನ್ನು ಎಸೆದಿದ್ದಾರೆ. ದಾಳಿಯ ಬಳಿಕ ಕಂದಹಾರ್ ವಿಮಾನನಿಲ್ದಾಣದಲ್ಲಿ ಎಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಕೆಟ್ ಗಳು ವಿಮಾನನಿಲ್ದಾಣದ ರನ್ ವೇಗೆ ಅಪ್ಪಳಿಸಿರುವುದಾಗಿ ವಿಮಾ ನಿಲ್ದಾಣದ ವಕ್ತಾರ ಮಸೂದ್ ಪಶ್ತೂನ್ ತಿಳಿಸಿದ್ದಾರೆ. ಆದರೆ ದಾಳಿಯಲ್ಲಿ ಯಾವುದೇ ಸಾವುನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ ತಾಲಿಬಾನ್ ವಕ್ತಾರ ಝಬಿಯುಲ್ಲಾ ಮುಜಾಹಿದ್ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಶತ್ರುಗಳು ನಮ್ಮ ವಿರುದ್ಧ ವಾಯುದಾಳಿಯನ್ನು ನಡೆಸಲು ಕಂದಹಾರ್ ವಿಮಾನನಿಲ್ದಾಣವನ್ನು ಬಳಸಿಕೊಳ್ಳುತ್ತಿದ್ದುದರಿಂದ ಅದನ್ನು ನಾವು ದಾಳಿಗೆ ಗುರಿ ಮಾಡಿದ್ದೇವೆ’’ ಎಂದವರು ಹೇಳಿದರು.
ತಾಲಿಬಾನ್ ಬಂಡುಕೋರರು ಕಂದಹಾರ್ ನಗರದ ಮೇಲೆ ದಾಳಿ ನಡೆಸದಂತೆ ತಡೆಯಲು ಹೋರಾಡುತ್ತಿರುವ ಅಫ್ಘಾನ್ ಪಡೆಗಳಿಗೆ ಕಂದಹಾರ್ ವಿಮಾನನಿಲ್ದಾಣದ ಮೂಲಕ ವ್ಯೆಹಾತ್ಮಕವಾದ ವೈಮಾನಿಕ ನೆರವನ್ನು ನೀಡಲಾಗುತ್ತಿತ್ತು.
ಅಫ್ಘಾನಿಸ್ತಾನದಿಂದ ಅಮೆರಿಕ ನೇತೃತ್ವದ ವಿದೇಶಿ ಪಡೆಗಳ ಅಂತಿಮ ಹಂತದ ನಿರ್ಗಮನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿರುವಂತೆಯೇ, ತಾಲಿಬಾನ್ ಬಂಡುಕೋರರು ತಮ್ಮ ದಾಳಿಗಳನ್ನು ತೀವ್ರಗೊಳಿಸಿದ್ದಾರೆ.
ಈ ಮಧ್ಯೆ ಹೇರತ್ ಪ್ರಾಂತದ ಗವರ್ನರ್ ಅವರ ವಕ್ತಾರ ಜೈಲಿಯಾನಿ ಫರ್ಹಾದ್ ಹೇಳಿಕೆ ನೀಡಿ, ದಾಳಿಯಲ್ಲಿ ಸುಮಾರು 100 ಮಂದಿ ತಾಲಿಬಾನ್ ಬಂಡುಕೋರರು ಮೃತರಾಗಿದ್ದಾರೆಂದು ತಿಳಿಸಿದರು.
ತಾಲಿಬಾನ್ ಹಾಗೂ ಅಫ್ಘಾನ್ ಪಡೆಗಳು ಪರಸ್ಪರರ ಪಡೆಗಳಮೇಲೆ ಆಗಿರುವ ಸಾವುನೋವಿನ ಸಂಖ್ಯೆಗಳನ್ನು ಉತ್ಪ್ರೇಕ್ಷಿಸಿ ಹೇಳುತ್ತಿರುವುದ್ದು, ಅವುಗಳನ್ನು ದ ದೃಡಪಡಿಸುವುದು ಕಷ್ಟಕರವಾಗಿದೆ ಎಂದು ಮೂಲಗಳು ತಿಳಿಸಿವೆ.







