ಜೆಡಿಎಸ್ ಈಗ ಜಾತ್ಯತೀತ ಪಕ್ಷವಾಗಿ ಉಳಿದಿಲ್ಲ: ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರವಾರದ ನೆರೆಬಾಧಿತ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ಕಾರವಾರ, ಆ.2: ಜೆಡಿಎಸ್ ಈಗ ಜಾತ್ಯತೀತ ಪಕ್ಷವಾಗಿ ಉಳಿದಿಲ್ಲ, ಜಾತ್ಯತೀತ ಸಿದ್ಧಾಂತ ಬಿಟ್ಟು ತುಂಬಾ ಸಮಯವಾಗಿದೆ. ಹಿಂದೆ ನಾವಿದ್ದ ಕಾಲದಲ್ಲಿ ಇದ್ದ ಜೆಡಿಎಸ್ ಪಕ್ಷ ಈಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕಾರವಾರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಈ ರೀತಿ ಪ್ರತಿಕ್ರಿಯಿಸಿದರು.
ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ
ರೇಣುಕಾಚಾರ್ಯ ಅವರು ತಮ್ಮ ವಿರುದ್ಧ ಮಾನಹಾನಿಯಾಗುವಂತ ವೀಡಿಯೋ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋಗಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆ ಉತ್ತರಿಸಿದ ಸಿದ್ದರಾಮಯ್ಯ, ತಮ್ಮ ವೀಡಿಯೋ ಬರಬಹುದು ಎಂಬ ಅನುಮಾನ ಸುಮ್ಮಸುಮ್ಮನೆ ರೇಣುಕಾಚಾರ್ಯ ಅವರಿಗೆ ಏಕೆ ಬರುತ್ತದೆ?. ಯಾವುದೋ ಕಾನೂನು ಬಾಹಿರ, ಅನೈತಿಕ ಕೃತ್ಯ ನಡೆಸಿ, ಸಿಕ್ಕಿಬಿದ್ದಿರಬಹುದು. ಎಷ್ಟೊಂದು ಮಂದಿ ರಾಜಕಾರಣಿಗಳಿದ್ದಾರೆ. ಆದರೆ ಅವರನ್ನೆಲ್ಲಾ ಬಿಟ್ಟು ರೇಣುಕಾಚಾರ್ಯ, ಸದಾನಂದ ಗೌಡರದ್ದೇ ಏಕೆ ವೀಡಿಯೋ ಮಾಡ್ತಾರೆ? ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ ಎನ್ನುವಂತೆ ಇವರ ಕಥೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷದವರು ತಾವು ಮಹಾನ್ ಸುಸಂಸ್ಕೃತರು ಎಂದು ಹೇಳಿಕೊಳ್ಳುತ್ತಾರೆ. ನಮ್ಮಂತಹ ಸಂಸ್ಕಾರ, ನಡತೆ ಯಾರಿಗೂ ಇಲ್ಲ ಎನ್ನುವಂತೆ ವರ್ತಿಸುತ್ತಾರೆ. ವಾಸ್ತವದಲ್ಲಿ ಇವರಷ್ಟು ಭಂಡರು ಯಾರೂ ಇಲ್ಲ.
ಬಿಜೆಪಿ ಭ್ರಷ್ಟರ ಪಕ್ಷ, ಅವರ ಸರಕಾರ ಭ್ರಷ್ಟ ಸರ್ಕಾರ. ಯಡಿಯೂರಪ್ಪ ಭ್ರಷ್ಟರಲ್ಲದೆ ಹೋಗಿದ್ದರೆ ಮುಖ್ಯಮಂತ್ರಿ ಹುದ್ದೆಯಿಂದ ಏಕೆ ಕೆಳಗಿಳಿಸುತ್ತಿದ್ದರೆ? ಯವಸ್ಸಾಗಿದ್ದು ಒಂದೇ ಕಾರಣವಾಗಿದ್ದರೆ ಎಪ್ಪತ್ತೈದು ದಾಟಿ ಎರಡು ವರ್ಷ ಕಳೆದಿಲ್ಲವೆ? ಇಷ್ಟು ಕಾಲ ಏಕೆ ಸುಮ್ಮನಿದ್ದರು? ಎಂದು ಪ್ರಶ್ನಿಸಿದರು.







