ತಜ್ಞರ ಎಚ್ಚರಿಕೆ ಹೊರತಾಗಿಯೂ ಬೀಚ್, ಲಗೂನ್ ವಿಲ್ಲಾಗಳ ಯೋಜನೆಗೆ ಟೆಂಡರ್ ಆಹ್ವಾನಿಸಿದ ಲಕ್ಷದ್ವೀಪ ಆಡಳಿತ

ಹೊಸದಿಲ್ಲಿ: ಲಕ್ಷದ್ವೀಪ ಒಂದು ಪರಿಸರಸೂಕ್ಷ್ಮ ಪ್ರದೇಶವಾಗಿರುವ ಹೊರತಾಗಿಯೂ ಅಲ್ಲಿನ ಮೂರು ದ್ವೀಪಗಳಲ್ಲಿ ಬೀಚ್ ಮತ್ತು ಲಗೂನ್ ವಿಲ್ಲಾಗಳ ನಿರ್ಮಾಣಕ್ಕೆ ಅಲ್ಲಿನ ಆಡಳಿತ ಮುಂದಡಿಯಿಟ್ಟಿದೆ. ಇದು ಅಭಿವೃದ್ಧಿಯ ತಪ್ಪಾದ ಕ್ರಮ ಎಂದು ತಜ್ಞರು ನೀಡಿದ್ದ ಎಚ್ಚರಿಕೆಯನ್ನು ಕಡೆಗಣಿಸಿ ಅಲ್ಲಿನ ಆಡಳಿತದ ನಿರ್ಧಾರ ಸಾಕಷ್ಟು ವಿವಾದಕ್ಕೂ ಈಡಾಗಿದೆ.
ಡಿಸೈನ್ ಬಿಲ್ಡ್ ಫೈನಾನ್ಸ್, ಆಪರೇಟ್, ಟ್ರಾನ್ಸ್‍ಫರ್ ಮಾದರಿಯಲ್ಲಿ 370 ವಿಲ್ಲಾಗಳ ನಿರ್ಮಾಣಕ್ಕಾಗಿ ಪ್ರಸ್ತಾವನೆಗಳನ್ನು ಆಹ್ವಾನಿಸಿ ಟೆಂಡರ್ ನೋಟಿಸ್ ಅನ್ನು ಜಿಲ್ಲಾ ಕಲೆಕ್ಟರ್ ಹಾಗೂ ಸೊಸೈಟಿ ಫಾರ್ ಪ್ರಮೋಷನ್ ಆಫ್ ನೇಚರ್ ಟೂರಿಸಂ ಎಂಡ್ ಸ್ಪೋರ್ಟ್ಸ್ ಆಡಳಿತ ನಿರ್ದೇಶಕರೂ ಆಗಿರುವ ಎಸ್ ಅಸ್ಕರ್ ಆಲಿ ಆಹ್ವಾನಿಸಿದ್ದಾರೆ. ಈ ಯೋಜನೆಯನ್ನು ಮಿನಿಕಾಯ್, ಕದ್ಮತ್ ಹಾಗೂ ಸುಹೇಲಿ ದ್ವೀಪಗಳಲ್ಲಿ ಕೈಗೆತ್ತಿಕೊಳ್ಳುವ ಉದ್ದೇಶವಿದೆ. ಟೆಂಡರ್ ಪ್ರಸ್ತಾವನೆಗಳನ್ನು ಸಲ್ಲಿಸಲು ಸೆಪ್ಟೆಂಬರ್ 2 ಅಂತಿಮ ದಿನಾಂಕವಾಗಿದೆ.
ಕಳೆದ ವರ್ಷವೇ ಸಂಶೋಧಕರು ಹಾಗೂ ವಿಜ್ಞಾನಿಗಳ ತಂಡವೊಂದು ಈ ನೀತಿ ಆಯೋಗ ನೇತೃತ್ವದ ಯೋಜನೆ ಪರಿಸರವಾಗಿ ವಿಪತ್ಕಾರಿಯಾಗಬಹುದೆಂಬ ಕುರಿತು ಎಚ್ಚರಿಕೆ ನೀಡಿತ್ತು. ಈ ಯೋಜನೆಯಿಂದ ಅಲ್ಲಿನ ಪರಿಸರಕ್ಕೆ ಹಾನಿಯ ಹೊರತಾಗಿ ಸ್ಥಳೀಯ ಸಮುದಾಯಗಳಿಗೂ ಅನಾನುಕೂಲ ಸೃಷ್ಟಿಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದರಲ್ಲದೆ ಹಲವು ಜಾತಿಯ ಆಮೆಗಳ ಸಂತಾನೋತ್ಪತ್ತಿ ಸ್ಥಳವೂ ಇದಾಗಿದೆ. ಇದರ ಹೊರತಾಗಿ ಮೀನು ಸಂಸ್ಕರಣೆ, ದೋಣಿಗಳ ನಿಲುಗಡೆಗೆ, ಮೀನು ಮಾರಾಟಕ್ಕೆ, ವಿಹಾರಕ್ಕಾಗಿ ಹಾಗೂ ಇತರ ಸಾಮಾಜಿಕ ಉದ್ದೇಶಗಳಿಗೆ ಇಲ್ಲಿನ ಬೀಚು ಪ್ರದೇಶ ಅತ್ಯಗತ್ಯವಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಟೆಂಡರ್ ನೋಟಿಸಿನಲ್ಲಿರುವ ಮಾಹಿತಿಯಂತೆ ಟೆಂಡರ್ ಪಡೆಯುವವರಿಗೆ ಮಿನಿಕಾಯ್‍ನಲ್ಲಿ 8.54 ಹೆಕ್ಟೇರ್ ಜಮೀನು ಹಾಗೂ 6 ಹೆಕ್ಟೇರ್ ಲಗೂನ್, ಕದ್ಮತ್‍ನಲ್ಲಿ 5.557 ಹೆಕ್ಟೇರ್ ಜಮೀನು ಹಾಗೂ 6 ಹೆಕ್ಟೇರ್ ಲಗೂನ್ ಹಾಗೂ ಸುಹೇಲಿ ದ್ವೀಪದಲ್ಲಿ 3.823 ಹೆಕ್ಟೇರ್ ಜಮೀನು ಹಾಗೂ 6 ಹೆಕ್ಟೇರ್ ಲಗೂನ್ ಮೇಲೆ 75 ವರ್ಷಗಳ ತನಕ ಹಕ್ಕು ದೊರೆಯಲಿದೆ.
ಮಿನಿಕಾಯ್‍ನಲ್ಲಿ 110 ಬೀಚ್ ವಿಲ್ಲಾಗಳು ಹಾಗೂ 40 ಫ್ಲೋಟಿಂಗ್ ವಿಲ್ಲಾಗಳು, ಕದ್ಮತ್‍ನಲ್ಲಿ 75 ಬೀಚ್ ವಿಲ್ಲಾಗಳು ಹಾಗೂ 35 ಫ್ಲೋಟಿಂಗ್ ವಿಲ್ಲಾಗಳು ಹಾಗೂ ಸುಹೇಲಿಯಲ್ಲಿ 60 ಬೀಚ್ ವಿಲ್ಲಾಗಳು ಹಾಗೂ 50 ತೇಲುವ ವಿಲ್ಲಾಗಳ ನಿರ್ಮಾಣ ಪ್ರಸ್ತಾಪಿಸಲಾಗಿದ್ದು ಯೋಜನೆಯ ಅಂದಾಜು ವೆಚ್ಚ ರೂ. 806 ಕೋಟಿಯಾಗಿದೆ.