ಉಡುಪಿಯಲ್ಲಿ ಮೆಗಾಲೋಕ್ ಅದಾಲತ್ ಕುರಿತು ಜಾಗೃತಿ ಜಾಥ

ಉಡುಪಿ, ಆ.2: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಉಡುಪಿ, ಕುಂದಾಪುರ, ಮತ್ತು ಕಾರ್ಕಳ ನ್ಯಾಯಾಲಯಗಳ ಆವರಣದಲ್ಲಿ ಆ.14ರಂದು ನಡೆಯಲಿರುವ ಮೆಗಾ ಲೋಕ್ ಅದಾಲತ್ ಕುರಿತು ಸಾರ್ವಜನಿಕರಿಗೆ ಪೂರ್ವ ಮಾಹಿತಿ ಒದಗಿಸುವ ಜಾಗೃತಿ ಜಾಥವನ್ನು ಉಡುಪಿ ಶೋಕಾ ಮಾತಾ ಚರ್ಚಿನ ಎದುರಿನ ಕವಿ ಮುದ್ದಣ ಮಾರ್ಗದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ಆಯೋಜಿಸಲಾದ ಈ ಜಾಥಕ್ಕೆ ಚಾಲನೆ ನೀಡಿದ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾ ಧೀಶೆ ಶರ್ಮಿಳಾ ಎಸ್. ಮಾತನಾಡಿ, ಸಾರ್ವಜನಿಕರು ಈ ಅದಾಲತ್ ಮೂಲಕ ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರವಾಗಿ ಪರಿಹಾರ ಪಡೆದುಕೊಳ್ಳಬಹುದು ಎಂದರು.
ನಗರ ಪೊಲೀಸ್ ಠಾಣೆಯ ನಿರೀಕ್ಷಕ ಪ್ರಮೋದ್ ಕುಮಾರ್, ಶೋಕಾ ಮಾತಾ ಇಗರ್ಜಿಯ ಧರ್ಮಗುರು ವಂದನೀಯ ಚಾರ್ಲ್ಸ್ ಮಿನೇಜಸ್ ಶುಭ ಹಾರೈಸಿದರು. ನ್ಯಾಯಧೀಶೆ ಕೆ.ಅಮೃತಕಲಾ, ಫಾ.ವಿಲಿಯಂ ಮಾರ್ಟಿಸ್, ನಾಗರಿಕ ಸಮಿತಿಯ ಸಹಸಂಚಾಲಕ ತಾರಾನಾಥ್ ಮೇಸ್ತ ಶಿರೂರು, ಸದಸ್ಯ ರಾಜೇಶ್ ಕಾಪು ಮೊದಲಾದವರು ಉಪಸ್ಥಿತರಿದ್ದರು.
ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಪ್ರಾಸ್ತಾವಿಕವಾಗಿ ಮಾತನಾಡಿ ದರು. ಕೆ.ಬಾಲಗಂಗಾಧರ ರಾವ್ ವಂದಿಸಿದರು. ಬಳಿಕ ಶೋಕಾಮಾತಾ ಚರ್ಚ್ ನಿಂದ ಕವಿ ಮುದ್ದಣ ಮಾರ್ಗದ ಮೂಲಕ ಸಾಗಿಬಂದು, ಚಿತ್ತರಂಜನ್ ಸರ್ಕಲ್ ಬಳಿ ಸಮಾಪನಗೊಂಡಿತು. ಈ ಮಧ್ಯೆ ಸಾರ್ವಜನಿಕರಿಗೆ ಮಾಹಿತಿ ಕರಪತ್ರ ಗಳನ್ನು ವಿತರಿಸಲಾಯಿತು.







