ಕೋವಿಡ್ ಲಸಿಕೆ ನೀಡುವಲ್ಲಿ ತಾರತಮ್ಯ ಆರೋಪ : ಡಿಎಚ್‌ಒ ಕಚೇರಿಗೆ ಕಾಂಗ್ರೆಸ್ ನಿಯೋಗ ಭೇಟಿ

ಮಂಗಳೂರು: ದ.ಕ. ಜಿಲ್ಲಾ ಕೋವಿಡ್ ಹೆಲ್ಪ್‌ಲೈನ್‌ನ ನಿಯೋಗವೊಂದು ಐವನ್ ಡಿಸೋಜ ನೇತೃತ್ವದಲ್ಲಿ ಜಿಲ್ಲಾ ಆರೋಗ್ಯ ಲಸಿಕೆ ಆರೋಗ್ಯ ವಿಭಾಗದ ಅಧಿಕಾರಿ ಡಾ.ರಾಜೇಶ್‌ಅವರನ್ನು ಭೇಟಿ ಮಾಡಿ, ಚರ್ಚೆ ನಡೆಸಿತು.
ಕೋವಿಡ್ ಲಸಿಕೆ ಪಡೆದ ನಂತರ ಮೃತಪಟ್ಟವರ ನಿಖರ ಮಾಹಿತಿ ನೀಡುವಂತೆ ಮತ್ತು ಕಾಲೇಜುಗಳು ಪ್ರಾರಂಭವಾಗಿದ್ದು, ಸುಮಾರು ಹಲವಾರು ವಿದ್ಯಾರ್ಥಿಗಳಿಗೆ ಇನ್ನೂ ಲಸಿಕೆ ನೀಡದಿರುವ ಬಗ್ಗೆ ಕೂಡಲೇ ಗಮನ ಹರಿಸಬೇಕು. 1,10,000 ವಿದ್ಯಾರ್ಥಿಗಳ ಪೈಕಿ 60,000 ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದ್ದು, ಉಳಿದವರ ಬಗ್ಗೆ ತೀರ್ಮಾನ ಏನು ಎಂದು ಪ್ರಶ್ನಿಸಿದರು.
ವ್ಯಾಕ್ಸಿನ್ ಕೊರತೆಯಿಂದ ಸಾವು ಹೆಚ್ಚಾಗುತ್ತಿದ್ದು, 3ನೇ ಅಲೆಯಲ್ಲಿ ದ.ಕ. ಜಿಲ್ಲಾ ರಾಜ್ಯದಲ್ಲಿಯೇ ಪ್ರಥಮ ಸ್ಥಾನಕ್ಕೆ ಏರಲು ಲಸಿಕೆ ಅಭಾವವೇ ಪ್ರಥಮ ಕಾರಣವಾಗಿದ್ದು, ಈ ಬಗ್ಗೆ ಸರಕಾರ ಸಂಪೂರ್ಣ ವಿಫಲಗೊಂಡಿದೆ ಎಂದು ದೂರಿದರು.
ವ್ಯಾಕ್ಸಿನೇಷನ್ 2ನೇ ಡೋಸ್ ಪಡೆಯಲು ಜನರು ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದರೂ ಸರಕಾರ ಎಲ್ಲವೂ ಸರಿಯಿದೆ ಎಂದು ಹೇಳುತ್ತಿರುವ ಬಗ್ಗೆ ಆರೋಗ್ಯಾಧಿಕಾರಿ ಗಮನಕ್ಕೆ ತಂದರು. ದಿನವೊಂದಕ್ಕೆ 600-7000ದವರೆಗೆ ಕೊರೋನ ಪರೀಕ್ಷೆ ಆಗುತ್ತಿದೆ. ಸುಮಾರು 40-60 ಮಂದಿ ವಾರವೊಂದಕ್ಕೆ ಸಾವನ್ನಪ್ಪುತ್ತಿದ್ದರೂ, ಇವರು ಕೋವಿಡ್ ಲಸಿಕೆ ಪಡೆದಿದ್ದಾರೆಯೇ ಎನ್ನುವ ಮಾಹಿತಿ ಇಲ್ಲದಿರುವುದು ವಿಪರ್ಯಾಸ ಎಂದು ನುಡಿದರು.
ಲಸಿಕೆಯನ್ನು ಬಿಜೆಪಿ ಕಾರ್ಯಕರ್ತರಿಗೆ ಹಂಚಿಕೆ ಮಾಡಲು ಅಧಿಕಾರ ನೀಡಿದವರು ಯಾರು? ಇಂತಹ ಘಟನೆ ಮುಂದುವರಿದ್ದಲ್ಲಿ, ಲಸಿಕಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಐವನ್ ಡಿಸೋಜ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಶಶಿಧರ್ ಹೆಗ್ಡೆ, ಮುಹಮ್ಮದ್ ಕುಂಜತ್ತ್‌ಬೈಲ್, ಅಪ್ಪಿಲತಾ, ಭಾಸ್ಕರ್ ರಾವ್, ಇಸ್ಮಾಯಿಲ್, ಎ.ಸಿ. ಜಯರಾಜ್, ದುರ್ಗಾ ಪ್ರಸಾದ್, ಹೊನ್ನಯ್ಯ, ಮಹೇಶ್ ಕುಮಾರ್, ವಿವೇಕ್ ರಾಜ್ ಪೂಜಾರಿ, ಯೂಸುಫ್ ಉಚ್ಛಿಲ್, ಸತೀಶ್ ಪೆಂಗಲ್, ಅಶೀತ್ ಪಿರೇರಾ, ಅಬೀಬುಲ್ಲ ಮುಂತಾದವರು ಉಪಸ್ಥಿತರಿದ್ದರು.







