ಮಲ್ಪೆ ಬೀಚ್‌ನಲ್ಲಿ ಸಮುದ್ರಪಾಲಾಗಿದ್ದ ಯುವತಿಯ ಮೃತದೇಹ ಪತ್ತೆ
ಮಲ್ಪೆ, ಆ.2: ಮಲ್ಪೆ ಬೀಚ್‌ನಲ್ಲಿ ಆಡುತ್ತಿದ್ದ ವೇಳೆ ಸಮುದ್ರ ಪಾಲಾಗಿದ್ದ ಕೊಡಗು ಮೂಲದ ಮೈಸೂರು ನಿವಾಸಿ ದೇಚಮ್ಮ ಯು.ಜೆ.(20) ಎಂಬವರ ಮೃತದೇಹವು ಇಂದು ಬೆಳಗ್ಗೆ 7.30ರ ಸುಮಾರಿಗೆ ಮಲ್ಪೆ ಸೀವಾಕ್ ಬಳಿ ಪತ್ತೆಯಾಗಿದೆ.
ಪ್ರವಾಸಕ್ಕೆ ಬಂದು ಮಲ್ಪೆಯ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದ ನಾಲ್ವರು, ಆ.1ರಂದು ಬೆಳಗ್ಗೆ ಮಲ್ಪೆ ಬೀಚ್‌ನ ಸಮುದ್ರದ ನೀರಿನಲ್ಲಿ ಆಟ ಆಡುತ್ತಿದ್ದರು. ಈ ವೇಳೆ ಸಮುದ್ರದ ನೀರಿನಲ್ಲಿ ತೆರೆಯ ಅಬ್ಬರಕ್ಕೆ ಈ ನಾಲ್ವರು ಸಿಲುಕಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಅದರಲ್ಲಿ ದೇಚಮ್ಮ ಸಮುದ್ರ ಪಾಲಾಗಿದ್ದರೆ, ಮೂವರನ್ನು ರಕ್ಷಿಸಲಾಗಿತ್ತು.
ಮಲ್ಪೆ ಸೀವಾಕ್‌ಗೆ ವಾಕಿಂಗ್ ತೆರಳಿದ್ದ ಸ್ಥಳೀಯರು ಸಮುದ್ರದಲ್ಲಿ ತೇಲುತ್ತಿದ್ದ ಮೃತದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಮೃತದೇಹ ವನ್ನು ಹಸ್ತಾಂತರಿಸಲಾಗಿದೆ. ಈಕೆ ಬೆಂಗಳೂರಿನ ಕಾಲೇಜೊಂದರ ಅಂತಿಮ ವರ್ಷದ ಬಿಸ್ಸಿ ವಿದ್ಯಾರ್ಥಿನಿಯಾಗಿದ್ದಳು. ಈಕೆ ತಾಯಿ ಹಾಗೂ ಸಹೋದರನ್ನು ಅಗಲಿದ್ದಾರೆ.
ಸಮುದ್ರದಲ್ಲಿ ಮುಳುಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ನಿಖಿಲ್ ಗೌಡ(20) ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







