30ಕ್ಕೂ ಹೆಚ್ಚು ಮಂಗಗಳ ಮಾರಣ ಹೋಮ ಪ್ರಕರಣ; 7 ಮಂದಿಯ ಬಂಧನ

ಹಾಸನ: ಮಂಗಗಳನ್ನು ಗೋಣಿ ಚೀಲದಲ್ಲಿ ತುಂಬಿಸಿ ಚೌಡನೇಹಳ್ಳಿ ಗ್ರಾಮದ ಬಳಿ ರಸ್ತೆ ಪಕ್ಕದಲ್ಲಿ ಬಿಸಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಇದೀಗ 7ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಗಗಳ ಮಾರಣ ಹೋಮ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 5 ಜನರನ್ನು ಬಂಧಿಸಿದರೆ, ಅರಣ್ಯ ಇಲಾಖೆಯವರು ಇಬ್ಬರನ್ನು ಬಂಧಿಸಿದ್ದು, ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಜಿಲ್ಲಾಧಿಕಾರಿಯವರ ನ್ಯಾಯಾಂಗ ಸಭಾಂಗಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಆರ್ ಗಿರೀಶ್, 'ಜಿಲ್ಲೆಯ ಉಗನೆ ಸೇರಿ ಎರಡು ಗ್ರಾಮದಲ್ಲಿ ಮಂಗಗಳ ಕಾಟ ಹೆಚ್ಚಾಗಿದ್ದರಿಂದ ಅವನ್ನೆಲ್ಲಾ ಬೇರೆ ಕಡೆಗೆ ಸಾಗಿಸುವ ಸಂದರ್ಭದಲ್ಲಿ ಸಾವನ್ನಪ್ಪಿವೆ ಎಂಬ ಮಾಹಿತಿ ಪ್ರಾಥಮಿಕ ಹಂತದ ತನಿಖೆ ವೇಳೆ ದೃಢಪಟ್ಟಿದೆ. ಇನ್ನು ತನಿಖೆ ಮುಂದುವರೆದಿದ್ದು, 7 ಜನರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು' ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಮಾತನಾಡಿ, 'ಮಂಗಗಳ ಮಾರಣ ಹೋಮ ಪ್ರಕರಣದ ಸಂಬಂಧ ಈಗಾಗಲೇ ಪೊಲೀಸ್ ಇಲಾಖೆಯಿಂದ ಐವರನ್ನು ಬಂಧಿಸಲಾಗಿದೆ. ರಾಮು, ಯಶೋಧ, ಮಂಜ, ಮಂಜೇಗೌಡ, ಐಯ್ಯಂಗಾರಿ ಇವರೆ ಬಂಧಿತರು ಎಂದು ಘೋಷಿಸಲಾಗಿದೆ' ಎಂದು ತಿಳಿಸಿದರು.
ಬೆಳೆಗಳನ್ನು ನಾಶಮಾಡುತ್ತಿದ್ದರಿಂದ ಬಾಣಾವಾರದ ರಾಮ ಹಾಗೂ ಯಶೋಧ ಎಂಬರನ್ನು ಜಮೀನು ಮಾಲಕ ಐಯ್ಯಂಗಾರಿ ಮಂಗಗಳನ್ನು ಹಿಡಿಯೋದಕ್ಕೆ ಕರೆಸಿದ್ದರು. ಈ ವೇಳೆ ಚೀಲದಲ್ಲಿ ತುಂಬಿ ಬೇರೆ ಕಡೆಗೆ ಸಾಗಿಸುವಾಗ ಉಸಿರುಗಟ್ಟಿ ಸಾವನಪ್ಪಿದೆ ಎಂದು ತಿಳಿದು ಬಂದಿದ್ದು, ಹೆಚ್ಚಿನ ತನಿಖೆಯಿಂದ ಮತ್ತು ಮರಣೋತ್ತರ ಪರೀಕ್ಷೆ ಬಂದ ಬಳಿಕ ಹೆಚ್ಚಿನ ತನಿಖೆ ಕೈಗೊಳ್ಳಲಾಗುವುದು ಎಂದು ಹೇಳಿದರು.
ಡಿಎಫ್ಓ ಬಸವರಾಜು ಮಾತನಾಡಿ, ಮಂಗಳ ವಿಚಾರವಾಗಿ ಈಗಾಗಲೇ ಅರಣ್ಯ ಇಲಾಖೆಯಿಂದ ಶ್ರೀಕಾಂತ್ ಹಾಗೂ ರಾಮಾನುಜ ಐಯ್ಯಾಂಗಾರ್ ಸೇರಿ ಇಬ್ಬರನ್ನು ಬಂಧಿಸಲಾಗಿದೆ. ಬೆಳೆದ ಬೆಳೆಗಳನ್ನು ನಾಶಪಡಿಸುತ್ತಿದ್ದವು ಎಂಬ ಹಿನ್ನೆಲೆ ಮಂಗಗಳನ್ನು ಹಿಡಿದು ಬೇರೆ ಕಡೆಗೆ ಸಾಗಿಸುವ ಪ್ಲಾನ್ ಮಾಡಿ ಗ್ರಾಮಸ್ಥರಿಂದ ಹಣ ಸಂಗ್ರಹಿಸಿ, ಮಂಗಗಳನ್ನು ಹಿಡಿಯೋದಕ್ಕೆ ತೀರ್ಮಾನ ಮಾಡಿಕೊಂಡಿದ್ದರು. ಅಡಕೆ ಬಂಬುಗಳನ್ನು ಬಳಸಿ, ಒಂದು ಬಾಕ್ಸ್ ರೆಡಿ ಮಾಡಿ, ಹ್ಯಾಂಡ್ ಪೌಡರ್ ಬಳಸಿ ಬಾಕ್ಸ್ ನಲ್ಲಿ ಉಳಿಯುವಂತೆ ಮಾಡಿದ್ದಾರೆ ಎಂದರು. ಬಾಕ್ಸ್ ನ ಇನ್ನೊಂದು ತುದಿಯಿಂದ ಸಣ್ಣ ಜಾಗ ಮಾಡಿ ಬ್ಯಾಗ್ ಗಳಿಗೆ ಮಂಗಗಳು ಹೋಗುವಂತೆ ರಂದ್ರ ಮಾಡಿದ್ದರು. ಒಂದೇ ಬ್ಯಾಗ್ ನಲ್ಲಿ ಮಂಗಗಳನ್ನು ತುಂಬಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿವೆ. ಪ್ರಾಥಮಿಕವಾಗಿ 30 ಮಂಗಗಳು ಉಸಿರುಗಟ್ಟಿ ಸಾವನ್ನಪ್ಪಿವೆ. ಎಂದು ಮಾಹಿತಿ ನೀಡಿದರು.







