ಉಡುಪಿ: ವ್ಯಾಕ್ಸಿನ್‌ಗೆ ಮುಗಿಬಿದ್ದ ಜನತೆ; ದಿನದಲ್ಲಿ 28,625 ಮಂದಿಗೆ ವಿತರಣೆ

ಉಡುಪಿ, ಆ.2: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಳೆದ ಮೂರು ದಿನಗಳ ಒಟ್ಟು 28,300 ಡೋಸ್ ಕೋವಿಡ್ ಲಸಿಕೆ ಯನ್ನು ಇಂದು ವಿತರಣೆಗೆ ಬಿಡುಗಡೆಗೊಳಿಸಿದ್ದು, ಇದಕ್ಕಾಗಿ ಜಿಲ್ಲೆಯಾದ್ಯಂತ ಜನತೆ ವಸ್ತುಶ: ಮುಗಿಬಿದ್ದು ಲಸಿಕೆಯನ್ನು ಪಡೆದುಕೊಂಡರು.
ಇದರಿಂದ ಸೋಮವಾರ ಒಂದೇ ದಿನದಲ್ಲಿ ಒಟ್ಟು 28,625 ಮಂದಿ ಕೋವಿಶೀಲ್ಡ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ ಎಂದು ಇಲಾಖೆ ಸಂಜೆ ಬಿಡುಗಡೆಗೊಳಿಸಿದ ದೈನಂದಿನ ವ್ಯಾಕ್ಸಿನ್ ಅಂಕಿ ಅಂಶದಲ್ಲಿ ತಿಳಿಸಿದೆ.
ಕಳೆದ ಮೂರು ದಿನಗಳ ವ್ಯಾಕ್ಸಿನ್‌ನ್ನು ಒಂದೇ ದಿನದಲ್ಲಿ ಬಿಡುಗಡೆಗೊಳಿಸಲಾ ಗಿದ್ದು, ಅವುಗಳನ್ನು ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಗಳು, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಲಸಿಕಾ ಕೇಂದ್ರಗಳಿಗೆ ಬಿಡುಗಡೆಗೊಳಿ ಸಲಾಗಿದೆ. ನಾಳೆ ಯಾವುದೇ ಲಸಿಕಾ ಶಿಬಿರ ಇರುವು ದಿಲ್ಲ. ಇಂದು ವಿತರಣೆ ಯಾಗದೇ ಉಳಿದ ಲಸಿಕೆ ಇದ್ದರೆ ಅದನ್ನು ನಾಳೆ ನೀಡಲಾಗುವುದು ಎಂದು ಇಲಾಖೆಯ ಲಸಿಕಾಧಿಕಾರಿ ಡಾ.ಎಂ.ಜಿ.ರಾಮ ತಿಳಿಸಿದ್ದಾರೆ.
ಇಂದು ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಥಮ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ವಿತರಿಸಿವೆ. ಮೊದಲ ಡೋಸ್ ಪಡೆದು 84 ದಿನ ಪೂರ್ಣಗೊಂಡವರಿಗೆ ಎರಡನೇ ಡೋಸ್‌ನ್ನು ನೀಡಲಾಗಿದೆ. ಲಸಿಕೆಗಾಗಿ ಬಂದ 18 ವರ್ಷ ಮೇಲಿನ ಎಲ್ಲರಿಗೂ ಇಂದು ಲಸಿಕೆ ನೀಲಾಗಿದೆ ಎಂದು ಡಾ.ರಾಮ ತಿಳಿಸಿದರು.
ಮುಗಿಬಿದ್ದ ಜನತೆ: ಕಳೆದ ಹಲವು ದಿನಗಳಿಂದ ಲಸಿಕೆಗಾಗಿ ಚಾತಕ ಪಕ್ಷಿಯಂತೆ ಕಾಯುತಿದ್ದ ಜನತೆ ಇಂದು ಬೆಳಗ್ಗೆ 7 ಗಂಟೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಇತರ ಲಸಿಕಾ ಕೇಂದ್ರಗಳ ಮುಂದೆ ಕ್ಯೂನಿಂತರು. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲೂ ಇಂದು ಹನುಮಂತನ ಬಾಲದಂತೆ ಉದ್ದನೆ ಕ್ಯೂ ಕಂಡುಬಂದಿದೆ. ಇದರಿಂದ ಲಸಿಕಾ ಕೇಂದ್ರದಲ್ಲಿ ಜನರು ಗುಂಪು ಸೇರಿದ್ದು ಸುರಕ್ಷತಾ ಅಂತರ ಇದ್ದಿರಲಿಲ್ಲ. ಜನರಿಗೆ ತಿಳಿಹೇಳುವವರೂ ಕಂಡುಬರಲಿಲ್ಲ. ಆದರೆ ಲಸಿಕೆಗಾಗಿ ನೆರೆದ ಹೆಚ್ಚಿನವರು ಮಾಸ್ಕ್ ಧರಿಸಿದ್ದು ಕಂಡುಬಂತು.
ದಿನದಲ್ಲಿ 23,579 ಮಂದಿಗೆ ಪ್ರಥಮ ಡೋಸ್ ಲಸಿಕೆ
ಸೋಮವಾರ ಜಿಲ್ಲೆಯಾದ್ಯಂತ ಒಟ್ಟು 28,625 ಮಂದಿಗೆ ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಗಿದೆ. ಇದರಲ್ಲಿ 23,579 ಮಂದಿ ಲಸಿಕೆಯ ಮೊದಲ ಡೋಸ್ ನೀಡಿದ್ದರೆ, 5046 ಮಂದಿ ಎರಡನೇ ಡೋಸ್‌ನ್ನು ಪಡೆದು ಕೊಂಡಿದ್ದಾರೆ.
18ರಿಂದ 44 ವರ್ಷದೊಳಗಿನ 18,504 ಮಂದಿ ಮೊದಲ ಡೋಸ್‌ನ್ನು ಪಡೆದುಕೊಂಡಿದ್ದರೆ, 1927 ಮಂದಿಗೆ ಎರಡನೇ ಡೋಸ್ ನೀಡಲಾಗಿದೆ. ಅದೇ ರೀತಿ 45 ವರ್ಷ ಮೇಲಿನ 5075 ಮಂದಿ ಮೊದಲ ಡೋಸ್‌ನ್ನು ಪಡೆದಿದ್ದರೆ, 3103 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. 14 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ ಇಬ್ಬರು ಮುಂಚೂಣಿ ಕಾರ್ಯಕರ್ತರು ಸಹ ಇಂದು ಎರಡನೇ ಡೋಸ್‌ನ್ನು ಪಡೆದುಕೊಂಡಿದ್ದಾರೆ ಎಂದು ಡಿಎಚ್‌ಓ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.









