ಉಪ್ಪಿನಂಗಡಿ: ಹೆದ್ದಾರಿಯಲ್ಲಿರುವ ಗುಂಡಿ ಮುಚ್ಚಿದ ತಾಯಿ - ಮಗಳು

ಉಪ್ಪಿನಂಗಡಿ: ಹಳೆಗೇಟು - ಮರ್ಧಾಳ ರಾಜ್ಯ ಹೆದ್ದಾರಿ ಹೊಂಡ- ಗುಂಡಿಗಳಿಂದ ಕೂಡಿದ್ದು, ಪೆರಿಯಡ್ಕ ಬಳಿಯ ಕಿಂಡೋವು ಎಂಬಲ್ಲಿ ಹೊಂಡ- ಗುಂಡಿಗಳಿಂದ ಉಂಟಾಗುವ ಸಂಭವನೀಯ ಅಪಘಾತವನ್ನು ತಪ್ಪಿಸುವ ಸಲುವಾಗಿ ತಾಯಿ ಮತ್ತು ಮಗಳು ಸೇರಿಕೊಂಡು ಹೆದ್ದಾರಿ ಗುಂಡಿಯನ್ನು ಮುಚ್ಚಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ಉಪ್ಪಿನಂಗಡಿಯಿಂದ ಕೆಮ್ಮಾರಕ್ಕೆ ಬರುವ ಮಧ್ಯೆ ಪೆರಿಯಡ್ಕದ ಕಿಂಡೋವು ಎಂಬಲ್ಲಿ ರಸ್ತೆಯಲ್ಲಿನ ಹೊಂಡ-ಗುಂಡಿಯನ್ನು ಸ್ಥಳೀಯ ನಿವಾಸಿ, ಆಶಾ ಕಾರ್ಯಕರ್ತೆಯೂ ಆಗಿರುವ ಅನಂತಾವತಿ ಮತ್ತು ಇವರ ತಾಯಿ ಸೇಸಮ್ಮ ಸೇರಿಕೊಂಡು ರಸ್ತೆಯಲ್ಲಿ ಹೊಂಡಗಳಿಗೆ ಮಣ್ಣು ಮತ್ತು ಕಲ್ಲುಗಳನ್ನು ಹಾಕಿ ಸರಿಪಡಿಸಿದರು. ಅಲ್ಲದೆ, ಕೆಲ ದಿನಗಳ ಹಿಂದೆ ಗುಂಡಿ ಮುಚ್ಚಲಾಗಿದ್ದ ಮಣ್ಣು ಎದ್ದು ರಾಶಿಯಾಗಿ ಅಪಘಾತಕ್ಕೆ ಕಾರಣವಾಗುವಂತಿದ್ದು, ಅದನ್ನು ತೆರವು ಮಾಡಿದರು. ಇವರ ಈ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಅಪಘಾತದ ಬಗ್ಗೆ ಭೀತಿ ಉಂಟಾಗಿದೆ: ಅನಂತಾವತಿ
ಈ ಜಾಗದಲ್ಲಿ ಪ್ರತೀ ವರ್ಷ ಮಳೆಗಾಲದಲ್ಲಿ ರಸ್ತೆಯಲ್ಲಿ ಹೊಂಡ ನಿರ್ಮಾಣವಾಗುತ್ತಿದ್ದು, ಕಳೆದ 3 ವರ್ಷಗಳಿಂದ ಪ್ರತೀ ವರ್ಷ ಅಫಘಾತ ನಡೆದು ಸಾವು-ನೋವು ಸಂಭವಿಸಿದೆ. ನಮ್ಮ ಮನೆ ಇದರ ಸಮೀಪದಲ್ಲೇ ಇದ್ದು, ವಾಹನಗಳ ಚಕ್ರ ಈ ಹೊಂಡಗಳಿಗೆ ಬಿದ್ದಾಗ ಬಾರೀ ಶಬ್ದವಾಗುವುದ ರೊಂದಿಗೆ ಅಪಘಾತದ ದೃಶ್ಯಗಳು ಕಣ್ಣಮುಂದೆ ಬಂದು ನಿಲ್ಲುತ್ತವೆ. ಅಂತಹ ಘಟನೆ ನಡೆಯದಿರಲಿ ಎಂದು ನಮ್ಮಿಂದ ಆಗುವ ಕಿಂಚಿತ್ ಸೇವೆ ಮಾಡಿರುವುದಾಗಿದೆ ಎಂದು ಅನಂತಾವತಿ ಪ್ರತಿಕ್ರಿಯಿಸಿದ್ದಾರೆ.







