ತ್ರಿಪುರಾ:ಹೊಂಚು ದಾಳಿಯಲ್ಲಿ ಇಬ್ಬರು ಬಿಎಸ್ಎಫ್ ಯೋಧರು ಹುತಾತ್ಮ

photo: Indian Express
ಅಗರ್ತಲಾ , ಆ.3: ತ್ರಿಪುರಾದ ಧಲಾಯಿ ಜಿಲ್ಲೆಯ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಮಂಗಳವಾರ ಬೆಳಿಗ್ಗೆ ಬಿಎಸ್ಎಫ್ ಗಸ್ತುತಂಡದ ಮೇಲೆ ನಿಷೇಧಿತ ಸಂಘಟನೆ ನ್ಯಾಷನಲ್ ಲಿಬರಲ್ ಫ್ರಂಟ್ ಆಫ್ ತ್ರಿಪುರಾ (ಎನ್ಎಲ್ಎಫ್ಟಿ)ದ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಓರ್ವ ಸಬ್-ಇನ್ಸ್ಪೆಕ್ಟರ್ ಸೇರಿದಂತೆ ಇಬ್ಬರು ಸಿಬ್ಬಂದಿಗಳು ಕೊಲ್ಲಲ್ಪಟ್ಟಿದ್ದಾರೆ.
ಧಲಾಯಿ ಜಿಲ್ಲೆಯ ಚಾವ್ಮಾನು ಪೊಲೀಸ್ ಠಾಣಾ ವ್ಯಾಪ್ತಿಯ ಆರ್.ಸಿ.ನಾಥ್ ಗಡಿಠಾಣೆಯ ಸಮೀಪ ಬೆಳಿಗ್ಗೆ 6:30ರ ಸುಮಾರಿಗೆ ದಾಳಿ ನಡೆದಿದ್ದು, ಬಿಎಸ್ಎಫ್ ಪಡೆಯು ಪ್ರತಿದಾಳಿಯನ್ನು ನಡೆಸಿತ್ತು. ಗುಂಡಿನ ವಿನಿಮಯದಲ್ಲಿ ಸಬ್-ಇನ್ಸ್ಪೆಕ್ಟರ್ ಭುರು ಸಿಂಗ್ ಮತ್ತು ಕಾನ್ಸ್ಟೇಬಲ್ ರಾಜಕುಮಾರ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಉಗ್ರರಲ್ಲಿಯೂ ಕೆಲವರು ಗಾಯಗೊಂಡಿರುವುದನ್ನು ಸ್ಥಳದಲ್ಲಿ ಪತ್ತೆಯಾಗಿರುವ ರಕ್ತದ ಕಲೆಗಳು ಬೆಟ್ಟುಮಾಡಿವೆ ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದರು. ಭಯೋತ್ಪಾದಕರ ಬಂಧನಕ್ಕಾಗಿ ಪ್ರದೇಶದಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ ಎಂದರು.
ಮೃತ ಬಿಎಸ್ಎಫ್ ಸಿಬ್ಬಂದಿಗಳ ಶಸ್ತ್ರಾಸ್ತ್ರಗಳನ್ನು ಭಯೋತ್ಪಾದಕರು ಹೊತ್ತೊಯ್ದಿದ್ದಾರೆ ಎಂದೂ ಅವರು ತಿಳಿಸಿದರು.
ರಾಜಧಾನಿ ಅಗರ್ತಲಾದಿಂದ 94 ಕಿ.ಮೀ.ದೂರದಲ್ಲಿರುವ ಧಲಾಯಿ ಜಿಲ್ಲೆಯು ಉತ್ತರ ಮತ್ತು ದಕ್ಷಿಣದಲ್ಲಿ ಬಾಂಗ್ಲಾದೇಶಕ್ಕೆ ಹೊಂದಿಕೊಂಡಿದೆ. 4,096 ಕಿ.ಮೀ.ಉದ್ದದ ಭಾರತ-ಬಾಂಗ್ಲಾದೇಶ ಗಡಿಯ ಪೈಕಿ 856 ಕಿ.ಮೀ.ಗಳನ್ನು ತ್ರಿಪುರಾ ಹಂಚಿಕೊಂಡಿದೆ.





