ಲಾಕ್ ಡೌನ್ ಅವಧಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಪ್ರಶ್ನಿಸಿ ಅರ್ಜಿ: ಸರಕಾರ, ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್

ಬೆಂಗಳೂರು, ಆ.3: ಕೊರೋನ ಲೌಕ್ ಡೌನ್ ಅವಧಿಯಲ್ಲಿ ಮಾಲ್‍ಗಳನ್ನು ಮುಚ್ಚಿಸಿದ ನಂತರವೂ ತೆರಿಗೆ ಹೆಚ್ಚಿಸಲು ಮುಂದಾಗಿರುವ ಕ್ರಮ ಪ್ರಶ್ನಿಸಿ ನಗರದ ಮಾಲ್ ಒಂದರ ಮಾಲಿಕರು ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರ ಹಾಗೂ ಬಿಬಿಎಂಪಿಗೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಬೆಂಗಳೂರಿನ ಜಿ.ಟಿ ಸಿನಿಮಾಸ್ ಪ್ರೈ. ಲಿ. ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿರುವ ನ್ಯಾ, ಎಂ. ನಾಗಪ್ರಸನ್ನ ಅವರಿದ್ದ ಪೀಠ, ರಾಜ್ಯ ಸರಕಾರ ಹಾಗೂ ಬಿಬಿಎಂಪಿಗೆ ನೋಟಿಸ್ ಜಾರಿ ಮಾಡಿದ್ದು ವಿಚಾರಣೆಯನ್ನು ಆಗಸ್ಟ್ 27ಕ್ಕೆ ಮುಂದೂಡಿದೆ. ಇದೇ ವೇಳೆ ಪಾಲಿಕೆ ಆಸ್ತಿ ತೆರಿಗೆ ವಸೂಲಿ ಮಾಡಲು ಬಲವಂತದ ಕ್ರಮಕ್ಕೆ ಮುಂದಾದಲ್ಲಿ ನ್ಯಾಯಾಲಯದ ಮೊರೆ ಹೋಗಲು ಅರ್ಜಿದಾರರಿಗೆ ಅನುಮತಿ ನೀಡಿದೆ.
ಅರ್ಜಿದಾರರ ಕೋರಿಕೆ: ಸರಕಾರದ ಸೂಚನೆಯಂತೆ ಮಾಲ್ ಹಾಗೂ ಇತರೆ ವಾಣಿಜ್ಯ ಕಟ್ಟಡಗಳನ್ನು ಲಾಕ್ ಡೌನ್ ಅವಧಿಯಲ್ಲಿ ಕಡ್ಡಾಯವಾಗಿ ಮುಚ್ಚಲಾಗಿದೆ. ಸರಕಾರದ ಆದೇಶದಂತೆ ಬೆಂಗಳೂರಿನ ಮಾಲ್ ಗಳನ್ನು 2019-20ರ ಆರ್ಥಿಕ ವರ್ಷದಲ್ಲಿ 18 ದಿನ, 2020-2021ರಲ್ಲಿ 69 ದಿನ ಹಾಗೂ 2021-22ನೇ ಆರ್ಥಿಕ ವರ್ಷದಲ್ಲಿ ಒಟ್ಟು 102 ದಿನ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಇದರಿಂದಾಗಿ ಮಾಲ್ ಗಳ ಕಾರ್ಯಚಟುವಟಿಕೆ ಸ್ಥಗಿತಗೊಂಡಿದ್ದು, ಆದಾಯವೇ ನಿಂತುಹೋಗಿದೆ. ಹೀಗಿದ್ದೂ ಬಿಬಿಎಂಪಿ ಆಸ್ತಿ ತೆರಿಗೆ ಹೆಚ್ಚಿಸಲು, ವಸೂಲಿ ಮಾಡಲು ಮುಂದಾಗಿರುವ ಕ್ರಮ ಸರಿಯಲ್ಲ. ಹೀಗಾಗಿ ಆಸ್ತಿ ತೆರಿಗೆಯನ್ನು ಹೆಚ್ಚಿಸದಂತೆ ಹಾಗೂ ಲಾಕ್ ಡೌನ್ ಅವಧಿಗೆ ಅನ್ವಯಿಸುವಂತೆ ತೆರಿಗೆ ವಿನಾಯಿತಿ ನೀಡುವಂತೆ ಸರಕಾರ ಹಾಗೂ ಪಾಲಿಕೆಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.







