ಕೇರಳದಿಂದ ಪುತ್ತೂರು ಸಂಪರ್ಕದ ಒಳ ರಸ್ತೆಗಳು ಸಂಪೂರ್ಣ ಬಂದ್

ಪುತ್ತೂರು: ಕೋವಿಡ್-19 ಹೆಚ್ಚಳದ ಹಿನ್ನಲೆಯಲ್ಲಿ ಕೇರಳದಿಂದ ಕರ್ನಾಟಕ ರಾಜ್ಯದ ಪುತ್ತೂರಿಗೆ ಸಂಪರ್ಕ ಕಲ್ಪಿಸುವ ಸುಮಾರು 13 ರಸ್ತೆಗಳಿದ್ದು, ಈ ರಸ್ತೆಗಳನ್ನು ಬ್ಯಾರಿಕೇಡ್ ಅಳವಡಿಕೆ ಜೊತೆಗೆ ರಸ್ತೆಗೆ ಮಣ್ಣು ಹಾಕಿ ಸಂಪೂರ್ಣ ಬಂದ್ ಮಾಡಲಾಗುತ್ತಿದೆ.
ಕೇರಳದ ರಾಜ್ಯದ ಕಾಸರಗೋಡು ಜಿಲ್ಲೆಯ ಅಡೂರು, ಮುಳ್ಳೇರಿಯ, ಬದಿಯಡ್ಕ, ಪೆರ್ಲ, ನೆಟ್ಟಣಿಗೆ, ಪಡ್ರೆ ಮತ್ತಿತರ ಕಡೆಗಳಿಂದ ಪುತ್ತೂರಿಗೆ ನಿರಂತರ ಸಂಪರ್ಕವಿದೆ. ಬಸ್ಸುಗಳ ಓಡಾಟವಿಲ್ಲದಿದ್ದರೂ ಖಾಸಗಿ ವಾಹನಗಳಲ್ಲಿ, ದ್ವಿಚಕ್ರ ವಾಹಗಳಲ್ಲಿ ಈ ಭಾಗದ ಜನರು ಪುತ್ತೂರಿಗೆ ಭೇಟಿ ನೀಡುತ್ತಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕೇರಳ-ಕರ್ನಾಟಕ ಸಂಪರ್ಕದ ಪ್ರಮುಖ 3 ರಸ್ತೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ರಸ್ತೆಗಳನ್ನು ಮಣ್ಣು ರಾಶಿ ಹಾಕಿ ಮುಚ್ಚಲಾಗುತ್ತಿದೆ.
ಶಾಸಕರಿಂದ ಸೂಚನೆ: ಕೇರಳದಿಂದ ಪುತ್ತೂರು ಸಂಪರ್ಕ ಕಲ್ಪಿಸುವ ಒಳ ರಸ್ತೆಗಳಲ್ಲಿ ಕೇವಲ ಬ್ಯಾರಿಕೇಡ್ ಅಳವಡಿಕೆಯಿಂದ ಮಾತ್ರ ವಾಹನ ಮತ್ತು ಜನ ಸಂಚಾರವನ್ನು ತಡೆಯಲು ಸಾಧ್ಯವಿಲ್ಲ. ಬ್ಯಾರಿಕೇಡ್‍ಗಳನ್ನು ಸರಿಸಿಕೊಂಡು ವಾಹನ ಪ್ರಯಾಣಿಕರು ಬರುತ್ತಿರುತ್ತಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ಎಲ್ಲಾ ಒಳ ರಸ್ತೆಗಳನ್ನು ಮಣ್ಣು ಹಾಕಿ ಬಂದ್ ಮಾಡುವಂತೆ ಶಾಸಕ ಸಂಜೀವ ಮಠಂದೂರು ಅವರು ಸೋಮವಾರ ನಡೆದ ಕೋವಿಡ್ ನಿಯಂತ್ರಣದ ಕುರಿತ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಹಿನ್ನಲೆಯಲ್ಲಿ ಮಂಗಳವಾರದಿಂದಲೇ ಅಧಿಕಾರಿಗಳು ರಸ್ತೆಯನ್ನು ಮಣ್ಣು ತುಂಬಿಸಿ ಬಂದ್ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ.
ಪ್ರಮುಖ ಮೂರು ರಸ್ತೆಯಲ್ಲಿ ಚೆಕ್‍ಪೋಸ್ಟ್
ಕೇರಳದಿಂದ ಪುತ್ತೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮೂರು ರಸ್ತೆಗಳಾದ ಮೇನಾಲ, ಸ್ವರ್ಗ ಮತ್ತು ಸುಳ್ಯಪದವು ಇಲ್ಲಿ ಚೆಕ್‍ಪೋಸ್ಟ್‍ಗಳನ್ನು ನಿರ್ಮಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಆದರೆ ಈ ರಸ್ತೆಯಲ್ಲಿ ಕಠಿಣ ತಪಾಸಣೆ ನಡೆಸಲಾಗುತ್ತಿದೆ. 72 ತಾಸುಗಳ ಒಳಗಿನ ಕೋವಿಡ್ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಒಳ ಬರಲು ಅವಕಾಶ ನೀಡಲಾಗುತ್ತಿದೆ. ಈ ರಸ್ತೆಯಲ್ಲಿ ಪ್ರಯಾಣಿಸುವ ಪ್ರತಿಯೊಂದು ವಾಹನಗಳನ್ನು ಅಧಿಕಾರಿಗಳು ತಪಾಸಣೆ ನಡೆಸಲಾಗುತ್ತಿದ್ದು, ಕೋವಿಡ್ ನೆಗೆಟಿವ್ ವರದಿ ಪರಿಶೀಲನೆ ನಡೆಸುತ್ತಿದ್ದಾರೆ. ಅಗತ್ಯವಿದ್ದವರಿಗೆ ಸ್ಥಳದಲ್ಲಿಯೇ ಕೋವಿಡ್ ಆರ್‍ಟಿಪಿಸಿ ಪರೀಕ್ಷೆ ನಡೆಸುತ್ತಿದ್ದಾರೆ. ಅನಗತ್ಯವಾಗಿ ಆಗಮಿಸುವ ವಾಹನಗಳನ್ನು ಹಿಂದಕ್ಕೆ ಕಳುಹಿಸಲಾಗುತ್ತಿದೆ. ಅಲ್ಲದೆ ಪುತ್ತೂರಿಗೆ ಆಗಮಿಸುವ ಪ್ರಯಾಣಿಕರ ಉದ್ದೇಶವನ್ನು ದಾಖಲಿಸಿಕೊಳ್ಳಲಾಗುತ್ತಿದ್ದು, ಅವರು ಯಾವುದಾದರೂ ಮನೆಗಳಿಗೆ ಭೇಟಿ ನೀಡುತ್ತಿದ್ದಲ್ಲಿ ಆ ಮನೆಯ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಪಡೆದುಕೊಳ್ಳುತ್ತಿದ್ದಾರೆ.







