ವೈಯಕ್ತಿಕ ಲಾಭಕ್ಕಾಗಿ ಬಿಜೆಪಿ ಸೇರುತ್ತಿದ್ದಾರೆ: ಶಾಸಕ ಎನ್.ಮಹೇಶ್ ವಿರುದ್ಧ ಬಿಎಸ್‌ಪಿ ರಾಜ್ಯಾಧ್ಯಕ್ಷ ಆಕ್ರೋಶ

ಚಾಮರಾಜನಗರ: ಡಾ.ಬಿ.ಆರ್.ಅಂಬೇಡ್ಕರ್, ಕಾನ್ಶಿರಾಂ ಅವರ ತತ್ವ, ಸಿದ್ಧಾಂತಗಳ ಅಡಿಯಲ್ಲಿ ಕೆಲಸ ಮಾಡಿ, ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿ (ಬಿಎಸ್‌ಪಿ) ಗೆದ್ದಿದ್ದ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರು ರಾಜಕೀಯದ ಅಸ್ತಿತ್ವಕ್ಕಾಗಿ ಹಾಗೂ ವೈಯಕ್ತಿಕ ಲಾಭಕ್ಕಾಗಿ ಬಿಜೆಪಿ ಸೇರುತ್ತಿದ್ದಾರೆ ಎಂದು ಬಿಎಸ್‌ಪಿ ರಾಜ್ಯಾಧ್ಯಕ್ಷ ಎಂ ಕೃಷ್ಣಮೂರ್ತಿ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಎಂ.ಕೃಷ್ಣಮೂರ್ತಿ, ‘ಅಂಬೇಡ್ಕರ್, ಪುಲೆ ಮುಂತಾದ ಮಾನವತಾವಾದಿಗಳ ತತ್ವ ಸಿದ್ಧಾಂತಗಳ ಅಡಿಯಲ್ಲಿ ರೂಪುಗೊಂಡಿರುವ ಬಿಎಸ್‌ಪಿಯಲ್ಲಿದ್ದ ಮಹೇಶ್ ಅವರು ಈಗ ಹೆಗ್ಗಡೆವಾರ್, ಗೋಲ್ವಾಲ್ಕರ್, ಸಾವರ್ಕರ್, ಶ್ಯಾಮ್ ಪ್ರಸಾದ್ ಮುಖರ್ಜಿ ಮುಂತಾದ ಮನುವಾದಿ, ಮೂಲಭೂತವಾದಿ ವ್ಯಕ್ತಿಗಳು ರೂಪಿಸಿರುವ ಆರ್‌ಎಸ್‌ಎಸ್, ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಅವರು ಅಂಬೇಡ್ಕರ್ ವಾದದಿಂದ ಮನುದಾದದ ಕಡೆಗೆ, ಅಂಬೇಡ್ಕರ್‌ವಾದದಿಂದ ಗೋಲ್ವಾಲ್ಕರ್‌ವಾದದ ಕಡೆಗೆ ಹೋಗುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.
‘ಮಹೇಶ್ ಅವರು ಉದ್ದೇಶಪೂರ್ವಕವಾಗಿಯೇ ಮೈತ್ರಿ ಸರ್ಕಾರದ ವಿಶ್ವಾಸಮತಯಾಚನೆ ಸಂದರ್ಭದಲ್ಲಿ ಸದನಕ್ಕೆ ಗೈರು ಹಾಜರಾಗಿದ್ದರು. ನಂತರದ ಬೆಳವಣಿಗೆಗಳು ಇದನ್ನು ಸಾಬೀತು ಪಡಿಸಿದ್ದವು. ಕೊಳ್ಳೇಗಾಲದಲ್ಲಿ ನೀರಾವರಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರು ಬಂದಿದ್ದಾಗ, ‘ಬಿಜೆಪಿ ಸರ್ಕಾರ ಬರಲು ನನ್ನಷ್ಟೇ ಮಹೇಶ್ ಅವರು ಕೂಡ ಕಾರಣಕರ್ತರು’ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು. ಕೆಲವು ತಿಂಗಳ ಹಿಂದೆ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಅವರು ಕೊಳ್ಳೇಗಾಲ ಬಂದಿದ್ದಾಗ ಇದೇ ರೀತಿ ಮಾತನಾಡಿದ್ದರು’ ಎಂದರು.
‘ಪಕ್ಷವನ್ನು ಯಾರಾದರೂ ತೊರೆದ ಸಂದರ್ಭದಲ್ಲಿ, ‘ಕಸ, ಕಸದ ಬುಟ್ಟಿಗೆ ಸೇರಿತು’ ಎಂದು ಸಂಸ್ಥಾಪಕ ಕಾನ್ಶಿರಾಂ ಅವರು ಹೇಳುತ್ತಿದ್ದರು. ಮಹೇಶ್ ಅವರು ಈ ಮಾತುಗಳನ್ನು ಹೆಚ್ಚು ಬಳಸುತ್ತಿದ್ದರು. ಈಗ ಅವರೇ ಈ ಮಾತಿಗೆ ಉದಾಹರಣೆಯಾಗಿರುವುದು ದುರಂತ’ ಎಂದು ಕೃಷ್ಣಮೂರ್ತಿ ಅವರು ಟೀಕಿಸಿದರು.
ಬಿಎಸ್‌ಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ಜಿಲ್ಲಾ ಘಟಕದ ಅಧ್ಯಕ್ಷ ಎನ್.ನಾಗಯ್ಯ, ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ ಹಾಗೂ ಚಾಮರಾಜನಗರ ತಾಲ್ಲೂಕು ಅಧ್ಯಕ್ಷ ಅರಕಲವಾಡಿ ಪ್ರಕಾಶ್ ಮತ್ತಿತರರಿದ್ದರು.







