ಉಡುಪಿ: ಕೋವಿಡ್ ಗೆ ಇಬ್ಬರು ಬಲಿ; 140 ಮಂದಿಗೆ ಕೊರೋನ ಪಾಸಿಟಿವ್

ಉಡುಪಿ, ಆ.4: ಜಿಲ್ಲೆಯಲ್ಲಿ ಬುಧವಾರ ಇಬ್ಬರು ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ದಿನದಲ್ಲಿ ಒಟ್ಟು 140 ಮಂದಿ ಕೋವಿಡ್‌ಗೆ ಪಾಸಿಟಿವ್ ಬಂದಿದ್ದಾರೆ. 124 ಮಂದಿ ಚಿಕಿತ್ಸೆಯ ಬಳಿಕ ಸೋಂಕಿನಿಂದ ಗುಣಮುಖರಾದರೆ, ಜಿಲ್ಲೆಯಲ್ಲಿ ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ 1279ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.
ಇಂದು ಕಾರ್ಕಳದ 81 ವರ್ಷ ಪ್ರಾಯದ ಮಹಿಳೆ ಹಾಗೂ ಉಡುಪಿಯ 55 ವರ್ಷ ಪ್ರಾಯದ ಪುರುಷ ಸೋಂಕಿಗೆ ಬಲಿಯಾಗಿದ್ದಾರೆ. ಇಬ್ಬರೂ ಕೊನೆಯ ಕ್ಷಣದಲ್ಲಿ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪ್ರಾರಂಭಿಸುತಿದ್ದಂತೆ ಮೃತಪಟ್ಟಿದ್ದಾರೆ. ಮಹಿಳೆ ಆ.3ರಂದು ಚಿಕಿತ್ಸೆಗೆ ದಾಖಲಾಗಿ ಅಂದೇ ಮೃತಪಟ್ಟರೆ, ಪುರುಷ ಆ.2ರಂದು ದಾಖಲಾಗಿ ಮರುದಿನ ಸೋಂಕಿಗೆ ಬಲಿಯಾದರು. ಇಬ್ಬರೂ ಕೋವಿಡ್ ಸೋಂಕಿನೊಂದಿಗೆ ಉಸಿರಾಟ ತೊಂದರೆ ಹಾಗೂ ನ್ಯುಮೋನಿಯಾದಿಂದ ನರಳುತಿದ್ದರು. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಕ್ಕೆ ಬಲಿಯಾದವರ ಸಂಖ್ಯೆ 420ಕ್ಕೇರಿದೆ.
ಇಂದು ಕೊರೋನ ಸೋಂಕು ದೃಢಪಟ್ಟ 140 ಮಂದಿಯಲ್ಲಿ 61 ಮಂದಿ ಪುರುಷರು ಹಾಗೂ 79 ಮಂದಿ ಮಹಿಳೆಯರು. ಇವರಲ್ಲಿ 69 ಮಂದಿ ಉಡುಪಿ ತಾಲೂಕು, 41 ಮಂದಿ ಕುಂದಾಪುರ ಹಾಗೂ 30 ಮಂದಿ ಕಾರ್ಕಳ ತಾಲೂಕಿ ನವರು. ಪಾಸಿಟಿವ್ ಬಂದವರಲ್ಲಿ 11 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಹಾಗೂ 129 ಮಂದಿ ಮನೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಮಂಗಳಾವರ 124 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 68,618ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 5702 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 70,317ಕ್ಕೇರಿದೆ ಎಂದು ಡಾ.ಉಡುಪ ತಿಳಿಸಿದರು. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 7,95,192 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.
ಇಂದು ಯಾರಲ್ಲೂ ಹೊಸದಾಗಿ ಬ್ಲಾಕ್ ಫಂಗಸ್ ಸೋಂಕು ಪತ್ತೆಯಾಗಿಲ್ಲ. ಹೀಗಾಗಿ ಸದ್ಯ ಎಂಟು ಮಂದಿ ಮಣಿಪಾಲ ಕೆಎಂಸಿ ಹಾಗೂ ಉಡುಪಿಯ ಆದರ್ಶ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
693 ಮಂದಿಗೆ ಲಸಿಕೆ: ಉಡುಪಿ ಜಿಲ್ಲೆಯಲ್ಲಿ ಇಂದು 693 ಮಂದಿಗೆ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಇವುಗಳಲ್ಲಿ 356 ಮಂದಿಗೆ ಮೊದಲ ಡೋಸ್ ಹಾಗೂ 337 ಮಂದಿಗೆ ಎರಡನೇ ಡೋಸ್‌ನ್ನು ನೀಡಲಾಗಿದೆ. 18ರಿಂದ 44 ವರ್ಷದೊಳಗಿನ 541 ಮಂದಿಗೆ ಹಾಗೂ 45 ವರ್ಷ ಮೇಲ್ಪಟ್ಟ 152 ಮಂದಿಗೆ ಇಂದು ಲಸಿಕೆಯನ್ನು ನೀಡಲಾಗಿದೆ ಎಂದು ಡಿಎಚ್‌ಓ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.







