ಶಶಿಕಲಾ ಜೊಲ್ಲೆಗೆ ಸಚಿವ ಸ್ಥಾನ: ಶಾಸಕಿ ಪೂರ್ಣಿಮಾ ಅಸಮಾಧಾನ
`ಹಗರಣ ಇಲ್ಲದ ಮಹಿಳೆಗೆ ಸಂಪುಟದಲ್ಲಿ ಅವಕಾಶ ನೀಡಿದ್ದರೆ ಸ್ವಾಗತಿಸುತ್ತಿದ್ದೆ'

ಬೆಂಗಳೂರು, ಆ. 4: ಅಂಗನವಾಡಿ ಕೇಂದ್ರಗಳಿಗೆ ಕೋಳಿಮೊಟ್ಟೆ ಪೂರೈಕೆ ಟೆಂಡರ್ ಅವ್ಯವಹಾರ ಆರೋಪಕ್ಕೆ ಸಿಲುಕಿರುವ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಕ್ಷೇತ್ರದ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ ಅವರಿಗೆ ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನ ನೀಡುವುದಕ್ಕೆ ಬಿಜೆಪಿ ಶಾಸಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಬುಧವಾರ ರಾಜಭವನದ ಗಾಜಿನಮನೆಯಲ್ಲಿ ಒಂದು ಬಾರಿಗೆ ಐದು ಮಂದಿಯಂತೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆದರೆ, ಸಚಿವ ಸ್ಥಾನ ಕೈತಪ್ಪುವ ಭೀತಿ ಹಿನ್ನೆಲೆಯಲ್ಲಿ ವರಿಷ್ಟರ ಮನವೊಲಿಕೆಗೆ ದಿಲ್ಲಿಗೆ ತೆರಳಿದ್ದ ಶಶಿಕಲಾ ಜೊಲ್ಲೆ ಅವರ ಆಗಮನ ವಿಳಂಬದ ಕಾರಣಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಕೊಂಚ ವಿಳಂಬ ಮಾಡಲಾಯಿತು ಎಂದು ಹೇಳಲಾಗಿದೆ.
ಈ ಮಧ್ಯೆ ದಿಲ್ಲಿಯಿಂದ ವಿಶೇಷ ವಿಮಾನದಲ್ಲಿ ಸಂಸದ ಹಾಗೂ ಪತಿ ಅಣ್ಣಾ ಸಾಹೇಬ್ ಜೊಲ್ಲೆ ಅವರೊಂದಿಗೆ ಆಗಮಿಸಿದ ಶಶಿಕಲಾ ಜೊಲ್ಲೆ ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದರು. ಆ ವೇಳೆಗಾಗಲೇ ಸಚಿವ ಸಂಪುಟ ಪ್ರಮಾಣ ವಚನ ಸ್ವೀಕಾರ ಸಮಾರಂಭವೂ ಆರಂಭವಾಗಿತ್ತು. ಆದರೆ, ವಿಮಾನ ನಿಲ್ದಾಣದಿಂದ ಝಿರೋ ಟ್ರಾಫಿಕ್‍ನಲ್ಲಿ ರಾಜಭವನಕ್ಕೆ ಆಗಮಿಸಿದ ಜೊಲ್ಲೆ ಅವರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಆದರೆ, `ಯಾವುದೇ ಹಗರಣ ಇಲ್ಲದ ಮಹಿಳೆಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡಿದ್ದರೆ ಸಂತೋಷದಿಂದ ನಾನೇ ಸ್ವಾಗತಿಸುತ್ತಿದ್ದೆ. ಇನ್ನೊಬ್ಬ ಶಾಸಕಿಗೂ ಬಿಜೆಪಿ ಪಕ್ಷ ಅವಮಾನ ಮಾಡಿದಂತಾಗಿದೆ. ಅಲ್ಲದೆ ಚಿತ್ರದುರ್ಗ ಜಿಲ್ಲೆಯ ಹಿರಿಯ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಗೂಳಿಹಟ್ಟಿ ಡಿ.ಶೇಖರ್ ಸೇರಿದಂತೆ ಇತರೆ ಶಾಸಕರಿಗೂ ಮಂತ್ರಿಗಿರಿ ನೀಡದೆ ಅವಮಾನಿಸಲಾಗಿದೆ' ಎಂದು ಚಿತ್ರದುರ್ಗ ಜಿಲ್ಲೆ ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕಿ ಪೂಣಿರ್ಮಾ ಶ್ರೀನಿವಾಸ್ ಅವರು ಆರೋಪಿಸಿದ್ದಾರೆ.
`ತುಮಕೂರು ಜಿಲ್ಲೆಯ ಶಿರಾ, ಬೀದರ್ ಜಿಲ್ಲೆಯ ಬಸವಕಲ್ಯಾಣ ಉಪ ಚುನಾವಣೆ, ಲೋಕಸಭೆ ಚುನಾವಣೆಗಳಲ್ಲಿ ಪಕ್ಷ ನಿಷ್ಠೆಯಿಂದ ಕೆಲಸ ಮಾಡಿದ್ದೆ. ಗೊಲ್ಲ, ಹಿಂದುಳಿದ ಸಮುದಾಯದ ಮತ ಸೆಳೆಯುವ ಕೆಲಸವನ್ನು ಅತ್ಯಂತ ನಿಷ್ಠೆಯಿಂದಲೇ ನಾನು ಮಾಡಿದ್ದೇನೆ. ನನ್ನ ಪತಿ ಶ್ರೀನಿವಾಸ್ ಪಕ್ಷೇತರರಾಗಿ ಎಂಎಲ್‍ಸಿ ಚುನಾವಣೆಗೆ ಸ್ಪರ್ಧಿಸಿದ್ದರು. ಆಗಲೂ ನಾನು ಪಕ್ಷ ನಿಷ್ಠೆಯಿಂದ ಶಿರಾ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದೆ. ಆದರೀಗ ಪಕ್ಷ ಜಾಣ ಕುರುಡುತನ ಪ್ರದರ್ಶಿಸಿರುವುದು ನೋವುಂಟು ಮಾಡಿದೆ' ಎಂದು ಪೂರ್ಣಿಮಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ನಾನು ಗೊಲ್ಲ(ಯಾದವ) ಸಮುದಾಯದ ಏಕೈಕ ಶಾಸಕಿ ಆಗಿದ್ದೇನೆ. ಎಂದೂ ಪಕ್ಷ ವಿರೋಧಿ ಚಟುವಟಿಕೆಯನ್ನು ಮಾಡಿಲ್ಲ. ಯಾವುದೇ ಹಗರಣ ನನಗೆ ಸುತ್ತಿಕೊಂಡಿಲ್ಲ. ಆದರೀಗ ಪಕ್ಷ ತೆಗೆದುಕೊಂಡ ನಿರ್ಧಾರ ನನಗೆ ಘಾಸಿ ಉಂಟು ಮಾಡಿದೆ. ಹಗರಣದಲ್ಲಿ ಸಿಲುಕಿಕೊಂಡವರಿಗೆ ಮತ್ತೆ ಮಂತ್ರಿಗಿರಿ. ಒಂದೇ ಮನೆಯಲ್ಲಿ ಇಬ್ಬರು, ಮೂವರಿಗೆ ಅಧಿಕಾರ ನೀಡಲಾಗಿದೆ' ಎಂದು ಶಶಿಕಲಾ ಜೊಲ್ಲೆ ವಿರುದ್ಧ ಬಹಿರಂಗವಾಗಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ವಾಗ್ದಾಳಿ ನಡೆಸಿದ್ದಾರೆ.







