ಸಂಸದನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದ ಯುವತಿಗೆ ಫೋರ್ಜರಿ ಕೇಸಿನಲ್ಲಿ ಜಾಮೀನುರಹಿತ ವಾರಂಟ್ ಜಾರಿ

ಹೊಸದಿಲ್ಲಿ: ಬಿಎಸ್‍ಪಿ ಸಂಸದ ಅತುಲ್ ರಾಯ್ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿರುವ 24 ವರ್ಷದ ಯುವತಿಗೆ ವಾರಣಾಸಿಯ ನ್ಯಾಯಾಲಯವೊಂದು ಜಾಮೀನುರಹಿತ ವಾರಂಟ್ ಹೊರಡಿಸಿದೆ. ಸಂಸದನ ಸೋದರ ಪವನ್ ಕುಮಾರ್ ಎಂಬವರು ದಾಖಲಿಸಿದ ಫೋರ್ಜರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವಾರಂಟ್ ಜಾರಿಯಾಗಿದೆ.
ಯುವತಿ ತನ್ನ ಜನನ ದಿನಾಂಕವನ್ನು ಮರೆಮಾಚಲು ದಾಖಲೆಗಳನ್ನು ಫೋರ್ಜರಿ ಮಾಡಿದ್ದಾಳೆಂದು ಸಂಸದನ ಸೋದರ ತಮ್ಮ ದೂರಿನಲ್ಲಿ ಆರೋಪಿಸಿದ್ದರು. ಘೋಸಿ ಕ್ಷೇತ್ರದ ಸಂಸದರಾಗಿರುವ ಅತುಲ್ ರಾಯ್ ಅವರು ಅತ್ಯಾಚಾರ ಪ್ರಕರಣದಲ್ಲಿ ಜೂನ್ 2019ರಿಂದ ಜೈಲಿನಲ್ಲಿದ್ದಾರೆ.
ಸಂಸದ ತನಗೆ ಸುಮಾರು ಒಂದು ವರ್ಷ ಕಿರುಕುಳ ನೀಡಿದ್ದರು, ತನ್ನ ವೀಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿಯೂ ಬೆದರಿಸಿದ್ದರೆಂದು ಮವು ಎಂಬಲ್ಲಿನ ನಿವಾಸಿಯಾಗಿರುವ ಯುವತಿ ತನ್ನ ದೂರಿನಲ್ಲಿ ಆರೋಪಿಸಿದ್ದಳು.
ಇದೀಗ ಆಕೆಯ ವಿರುದ್ಧ ಸಂಸದನ ಸೋದರ ದಾಖಲಿಸಿದ್ದ ದೂರಿನ ಸಂಬಂಧ ಯುವತಿಯ ಹೇಳಿಕೆ ಪಡೆಯಲು ಆಕೆಯ ಮನೆಗೆ ಹಲವಾರು ಬಾರಿ ತೆರಳಿದ್ದರೂ ಆಕೆಯ ಪತ್ತೆಯಿಲ್ಲದೇ ಇರುವುದರಿಂದ ಆಕೆಯ ವಿರುದ್ಧ ಜಾಮೀನುರಹಿತ ವಾರಂಟ್ ಜಾರಿಗೊಳಿಸಲು ಕೋರ್ಟ್ ಮೊರೆ ಹೋಗಲಾಯಿತೆಂದು ಪೊಲೀಸರು ಹೇಳಿದ್ದಾರೆ.
ಸಂಸದನ ಸೋದರನ ದೂರಿನ ಪ್ರಕಾರ ಯುವತಿಯು 2015ರಲ್ಲಿ ವಿದ್ಯಾರ್ಥಿ ನಾಯಕನೊಬ್ಬನ ವಿರುದ್ಧ ದಾಖಲಿಸಿದ್ದ ದೂರಿನ ಜತೆ ವಯಸ್ಸು ದೃಢೀಕರಣಕ್ಕಾಗಿ ನೀಡಿದ್ದ ಆಕೆಯ ಹೈಸ್ಕೂಲ್ ಮಾರ್ಕ್ ಶೀಟ್‍ನಲ್ಲಿ ಆಕೆಯ ಜನನ ದಿನಾಂಕ ಮಾರ್ಚ್ 10, 1997 ಎಂದಿದ್ದರೆ ಸಂಸದನ ವಿರುದ್ಧ 2019ರಲ್ಲಿ ನೀಡಿದ ದೂರಿನ ಜತೆ ನೀಡಲಾಗಿದ್ದ ಆಕೆಯ ಹೈಸ್ಕೂಲ್ ಮಾರ್ಕ್ ಶೀಟ್‍ನಲ್ಲಿ ಆಕೆಯ ಜನನ ದಿನಾಂಕ ಜೂನ್ 10, 1997 ಎಂದಿದೆ ಎಂದು ಹೇಳಿದ್ದಾರೆ.
ಯುವತಿಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.