ಉಡುಪಿ ಜಿಲ್ಲೆಯಲ್ಲಿ ರಾತ್ರಿ ಕರ್ಫ್ಯೂ ಜಾರಿ : ಜಿಲ್ಲಾಧಿಕಾರಿ ಜಿ. ಜಗದೀಶ್

ಉಡುಪಿ, ಆ.5: ಜಿಲ್ಲೆಯಲ್ಲಿ ಮತ್ತೆ ಹೆಚ್ಚುತ್ತಿರುವ ಕೋವಿಡ್-19 ಸೋಂಕು ನಿಯಂತ್ರಿಸಲು ಹಾಗೂ ಸೋಂಕಿನ ಸರಪಳಿಯನ್ನು ಮುರಿಯಲು ಜಿಲ್ಲೆಯಾದ್ಯಂತ ರಾತ್ರಿ ಕರ್ಫ್ಯೂವನ್ನು ಮತ್ತೆ ವಿಧಿಸಲಾಗಿದೆ. ಈ ಕರ್ಫ್ಯೂ ಜಿಲ್ಲೆಯಾದ್ಯಂತ ರಾತ್ರಿ 10:00ರಿಂದ ಮರುದಿನ ಬೆಳಗ್ಗೆ 5:00ರವರೆಗೆ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಈ ಸಂಬಂಧ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.
ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ ರಾತ್ರಿ 10ರಿಂದ ಬೆಳಗ್ಗೆ 5ರ ನಡುವೆ ಅಗತ್ಯ ಚಟುವಟಿಕೆಗಳನ್ನು ಹೊರತು ಪಡಿಸಿ ಜನರ ಓಡಾಟಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಉಳಿದಂತೆ ಕೋವಿಡ್-19ರ ಹಿಂದಿನ ಎಲ್ಲಾ ಮಾರ್ಗಸೂಚಿಗಳು ಜಾರಿಯಲ್ಲಿರುತ್ತದೆ.
ರೋಗಿಗಳು ಮತ್ತು ಅವರೊಂದಿಗೆ ತೆರಳುವ ಪರಿಚಾರಕರು, ತುರ್ತು ಅಗತ್ಯತೆಗಾಗಿ ವ್ಯಕ್ತಿಗಳನ್ನು ಸ್ಥಳಾಂತರಿಸಲು ಅನುಮತಿ ಇದೆ. ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವವರು ರಾತ್ರಿ ಸಮಯದಲ್ಲಿ ತೆರಳಲು ಅನುಮತಿ ನೀಡಲಾಗಿದೆ. ವೈದ್ಯಕೀಯ ಸೇವೆ, ತುರ್ತು ಮತ್ತು ಔಷಧಾಲಯಗಳು ಯಥಾ ರೀತಿಯಲ್ಲಿ ಕಾರ್ಯನಿರ್ವಹಿಸಬಹುದು. ಆದರೆ ಇತರ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ.
ಬಸ್ ಸೇವೆಗಳು, ರೈಲುಗಳು ಹಾಗೂ ವಿಮಾನ ಪ್ರಯಾಣಕ್ಕೆ ಅವಕಾಶವಿದೆ. ಅಲ್ಲಿಗೆ ಸಾರಿಗೆ ವಾಹನ, ಖಾಸಗಿ ವಾಹನ, ಟ್ಯಾಕ್ಸಿಗಳಲ್ಲಿ ತೆರಳಲು ಅನುಮತಿ ಇದೆ. ಆದರೆ ಸೂಕ್ತ ಪ್ರಯಾಣದ ದಾಖಲೆಗಳು, ಟಿಕೆಟ್‌ಗಳನ್ನು ಹೊಂದಿರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.







