ಸ್ತನ್ಯಪಾನ ಸಪ್ತಾಹ-2021 ಮಾಹಿತಿ ಕಾರ್ಯಕ್ರಮ

ಉಡುಪಿ, ಆ.5: ಎಳೆಯ ಮಕ್ಕಳಿಗೆ ಅವಶ್ಯವಿರುವ ತಾಯಿಯ ಎದೆ ಹಾಲಿನ ಮಹತ್ವವನ್ನು ಸಮಾಜಕ್ಕೆ ತಿಳಿಸುವ ಜವಾಬ್ದಾರಿ ನಮ್ಮದಾಗ ಬೇಕು. ಸ್ತನ್ಯಪಾನ ದಲ್ಲಿರುವ ರೋಗನಿರೋಧಕ ಶಕ್ತಿಯ ಮಹತ್ವದ ಬಗ್ಗೆ ಅರಿತುಕೊಂಡಾಗ ಮಾತ್ರ ಅಂಗವೈಫಲ್ಯ ಮತ್ತು ಶಾರೀರಿಕ ದುರ್ಬಲತೆಯನ್ನು ತಡೆಯಬಹುದು ಎಂದು ಜಿಲ್ಲೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ ಹೇಳಿದ್ದಾರೆ.
ಕಾಜಾರಗುತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಜಾರಗುತ್ತು ಮತ್ತು ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ಇವರ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ಸ್ತನ್ಯಪಾನ ಸಪ್ತಾಹ-2021ರ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಭವಿಷ್ಯದ ದೃಷ್ಟಿಯಿಂದ ಉತ್ತಮ ಪೌಷ್ಠಿಕಾಂಶವನ್ನು ನೀಡುವುದರ ಮೂಲಕ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಲು ತಾಯಿ ಎದೆ ಹಾಲಿನ ಮಹತ್ವವನ್ನು ಸಮಾಜದ ಅನಕ್ಷರಸ್ಥರಿಗೂ ತಿಳಿಸಿ, ಅರಿವು ಮೂಡಿಸಬೇಕು ಎಂದವರು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಾಲವಿಕಾಸ ಸಮಿತಿ ಸದಸ್ಯ ಲಕ್ಷ್ಮೀನಾರಾಯಣ, ಸಮಾಜದಲ್ಲಿ ಮಕ್ಕಳ ಅಭಿವೃದ್ಧಿಗೆ ಸಹಕಾರಿ ಯಾಗುವಂತಹ ಸ್ತನ್ಯಪಾನ ಸಪ್ತಾಹದಂತ ಕಾರ್ಯಕ್ರಮಗಳನ್ನು ಹೆಚ್ಚು-ಹೆಚ್ಚು ಹಮ್ಮಿಕೊಳ್ಳಬೇಕು. ಸರಕಾರ ಶಿಶು ಅಭಿವೃದ್ಧಿಗೆಂದೇ ಬಾಲ ವಿಕಾಸದಂತ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸದುಪಯೋಗವನ್ನು ಮಕ್ಕಳು ಪಡೆದುಕೊಂಡಲ್ಲಿ ಮಾತ್ರ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ ಎಂದರು.
ಮಣಿಪಾಲ ಕಾಲೇಜಿನ ನರ್ಸಿಂಗ್ ವಿಭಾಗದ ಅನುಸೂಯ ಸ್ತನ್ಯಪಾನ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸಾಧು ಹಾಗೂ ಇತರರು ಉಪಸ್ಥಿತರಿದ್ದರು. ಸಂಗೀತಾ ಎಮ್.ಕೆ ಕಾರ್ಯಕ್ರಮ ನಿರೂಪಿಸಿ, ಅಂಗನವಾಡಿ ಕಾರ್ಯಕರ್ತೆ ಪ್ರೇಮ ವಂದಿಸಿದರು.







