ನ್ಯಾ.ಯಾದವ್ ವನಮಾಲಾ ಆನಂದರಾವ್‌ಗೆ ಬೀಳ್ಕೊಡುಗೆ

ಉಡುಪಿ, ಆ.5: ಉಡುಪಿ ಜಿಲ್ಲಾ ಕುಟುಂಬ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾಗಿದ್ದು, ಹಾವೇರಿ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾಗಿ ವರ್ಗಾವಣೆಗೊಂಡಿರುವ ನ್ಯಾ. ಯಾದವ್ ವನಮಾಲಾ ಆನಂದರಾವ್ ಅವರಿಗೆ ಉಡುಪಿ ವಕೀಲರ ಸಂಘದ ವತಿಯಿಂದ ಬೀಳ್ಕೊಡುಗೆ ಸಮಾರಂಭ ಗುರುವಾರ ಸಂಜೆ ನಡೆಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನ್ಯಾ. ಯಾದವ್ ವನಮಾಲಾ ಆನಂದ ರಾವ್, ಸರಕಾರಿ ಸೇವೆಯಲ್ಲಿ ವರ್ಗಾವಣೆ ಸಾಮಾನ್ಯ. ನನ್ನ ವೃತ್ತಿಗೆ ಉಡುಪಿಯಲ್ಲಿ ಪೂರಕ ವಾತಾವರಣ ಸಿಕ್ಕಿದೆ. ಇಲ್ಲಿನ ವಕೀಲರ ಸಹಕಾರದಿಂದಾಗಿ ಅದೆಷ್ಟೋ ನೊಂದಜೀವಗಳಿಗೆ ನ್ಯಾಯಾನ ನೀಡಲು ಸಾಧ್ಯವಾಗಿದೆ ಎಂದರು.
ನಮ್ಮ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಸಂಸ್ಕೃತಿ ಇದೆ. ಇಂದು ಅವೆಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ. ಶಿಕ್ಷಣ ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗಬಾರದು. ಮಾನವೀಯ ವೌಲ್ಯಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್. ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಪೋಕ್ಸೋ ನ್ಯಾಯಾಲಯ, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎರ್ಮಾಳ್ ಕಲ್ಪನಾ, ಉಡುಪಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್., ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿ ಶಕುಂತಳಾ, ವಕೀಲೆ ಸಹನಾ ಸೂಡಾ ಉಪಸ್ಥಿತರಿದ್ದರು.
ವಕೀಲರ ಸಂಘದ ಅಧ್ಯಕ್ಷ ದಿವಾಕರ ಎಂ. ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ವಂದಿಸಿದರು. ವಕೀಲರಾದ ನಾಗರತ್ನಾ, ಅಖಿಲ್ ಬಿ. ಹೆಗ್ಡೆ ಅವರು ನಿರ್ಗಮನ ನ್ಯಾಯಾಧೀಶರ ಬಗ್ಗೆ ಶುಭಾಶಂಸನೆಗೈದರು. ವಕೀಲ ರಾಜೇಶ್ ಎ.ಆರ್. ಕಾರ್ಯಕ್ರಮ ನಿರೂಪಿಸಿದರು.







