ಅರುಣಾಚಲ ಪ್ರದೇಶ : ಎಸ್‌ಟಿ ಪಟ್ಟಿ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯ ಅಂಗೀಕಾರ

ಹೊಸದಿಲ್ಲಿ,ಆ.5: ರಾಜ್ಯಸಭೆಯು ಗುರುವಾರ ಪೆಗಾಸಸ್,ಕೃಷಿಕಾಯ್ದೆಗಳು ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಪ್ರತಿಭಟನೆಗಳ ನಡುವೆಯೇ ಸಂವಿಧಾನ (ಪರಿಶಿಷ್ಟ ಪಂಗಡಗಳು) ಆದೇಶ (ತಿದ್ದುಪಡಿ) ಮಸೂದೆ,2021ನ್ನು ಧ್ವನಿಮತದಿಂದ ಅಂಗೀಕರಿಸಿದ್ದು,ಅರುಣಾಚಲ ಪ್ರದೇಶವು ಶಿಫಾರಸು ಮಾಡಿರುವಂತೆ ರಾಜ್ಯದಲ್ಲಿಯ ಪರಿಶಿಷ್ಟ ಪಂಗಡಗಳ ಸಾಂವಿಧಾನಿಕ ಪಟ್ಟಿಯನ್ನು ತಿದ್ದುಪಡಿಗೊಳಿಸಲು ಈ ಮಸೂದೆಯು ಉದ್ದೇಶಿಸಿದೆ.
ಈ ಮಸೂದೆಯು ಬುಡಕಟ್ಟು ಜನರಿಗೆ ನ್ಯಾಯವನ್ನು ಒದಗಿಸಲಿದೆ. ದಯವಿಟ್ಟು ಬೆಂಬಲಿಸಿ ಎಂದು ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ ಮುಂಡಾ ಅವರು ಪ್ರತಿಭಟನಾನಿರತರನ್ನು ಕೋರಿಕೊಂಡರು. ಈ ನಡುವೆ ಪ್ರತಿಭಟನೆಗಳನ್ನು ನಡೆಸಿ ಪೆಗಾಸಸ್ ಬೇಹುಗಾರಿಕೆ ಹಗರಣ ಹಾಗೂ ವಿವಾದಾತ್ಮಕ ಕೃಷಿ ಕಾಯ್ದೆಗಳ ಕುರಿತು ಚರ್ಚೆಗೆ ಆಗ್ರಹಿಸುವ ಮೂಲಕ ಸಂಸತ್ತಿನ ಕಲಾಪಗಳಿಗೆ ಅಡ್ಡಿಯನ್ನುಂಟು ಮಾಡುತ್ತಿರುವುದಕ್ಕಾಗಿ ಪ್ರತಿಪಕ್ಷಗಳ ವಿರುದ್ಧ ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ,ದೇಶವು ಮುನ್ನಡೆಯುವುದನ್ನು ಪ್ರತಿಪಕ್ಷಗಳು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.





