ಉದ್ದೇಶವಿಲ್ಲದೆ ಮಾಡಿದ ಮೋಜು ಕ್ರೌರ್ಯವಲ್ಲ: ಹೈಕೋರ್ಟ್

ಬೆಂಗಳೂರು, ಆ.5: ವ್ಯಕ್ತಿಯೊಬ್ಬರಿಗೆ ನೋಯಿಸುವ ಯಾವುದೇ ಉದ್ದೇಶವಿಲ್ಲದೆ ಮಾಡುವ ಮೋಜನ್ನು ಕ್ರೌರ್ಯ ಎಂದು ಪರಿಗಣಿಸಲಾಗದು ಎಂದು ಹೈಕೋರ್ಟ್ ನಿಂದನೆ ಹಾಗೂ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ವಜಾಗೊಳಿಸುವ ವೇಳೆ ಅಭಿಪ್ರಾಯಪಟ್ಟಿದೆ.
ಲಾಸ್ ಏಂಜಲೀಸ್ ಮೂಲದ ದಂತ ವೈದ್ಯ ಹಾಗೂ ಆತನ ಪೋಷಕರ ವಿರುದ್ಧ ಮಹಿಳೆಯೊಬ್ಬರು ಬೆಂಗಳೂರಿನ ಹಲಸೂರು ಗೇಟ್ ಪೋಲೀಸ್ ಠಾಣೆಗೆ ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3, 4 ಹಾಗೂ ಐಪಿಸಿ ಸೆಕ್ಷನ್ 406 ಹಾಗೂ 325 ಅಡಿ 2017ರಲ್ಲಿ ದೂರು ಸಲ್ಲಿಸಿದ್ದರು. ಈ ದೂರು ರದ್ದು ಕೋರಿ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ, ಜಿ. ನರೇಂದರ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿ, ಪ್ರಕರಣವನ್ನು ರದ್ದುಪಡಿಸಿದೆ.
ದಂತವೈದ್ಯನಾಗಿರುವ ಪತಿ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಎಮ್ ಡಿಎಸ್ ಓದುವ ವೇಳೆ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯ ಪರಿಚಯವಾಗಿತ್ತು. ನಂತರ ಪರಸ್ಪರ ಪ್ರೀತಿಸಿ 2012ರಲ್ಲಿ ವಿವಾಹವಾಗಿದ್ದ ದಂಪತಿ ನಡುವೆ ಅಸಮಾಧಾನ ಉಂಟಾಗಿತ್ತು. ಮದುವೆ ಬಳಿಕ ಪತಿ ಕೆಟ್ಟದಾಗಿ ವರ್ತಿಸಿದ, ಅದರಲ್ಲೂ ಅನಾರೋಗ್ಯಕ್ಕೆ ಒಳಗಾಗಿದ್ದಾಗ ಹುಟ್ಟುವ ಮಕ್ಕಳು ಇನ್ನಷ್ಟು ರೋಗಿಗಳಾಗುತ್ತಾರೆ ಎಂದು ಕೀಳಾಗಿ ನುಡಿದಿದ್ದ ಎಂದು ಮಹಿಳೆ ಆರೋಪಿಸಿದ್ದರು.
ಜತೆಗೆ ಪತಿಗೆ ಮತ್ತೋರ್ವ ಮಹಿಳಾ ವೈದ್ಯೆಯೊಂದಿಗೆ ಅಕ್ರಮ ಸಂಬಂಧವಿದೆ ಎಂದೂ ದೂರಿದ್ದರು. ಅರ್ಜಿ ವಿಚಾರಣೆ ವೇಳೆ ಮಹಿಳೆಯ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಹಾಗೂ ಆಕೆಯ ಆರೋಪಗಳನ್ನು ಖಚಿತಪಡಿಸುವ ಸಾಕ್ಷ್ಯಗಳಿಲ್ಲ ಎಂಬುದನ್ನು ಗಮನಿಸಿದ ಪೀಠ, ಅರ್ಜಿ ವಜಾ ಮಾಡಿದೆ. ಈ ವೇಳೆ ನೋಯಿಸುವ ಉದ್ದೇಶವಿಲ್ಲದೇ ಮಾಡಿದ ಮೋಜು ಕ್ರೌರ್ಯದ ವ್ಯಾಪ್ತಿಗೆ ಬರದು ಎಂದು ಅಭಿಪ್ರಾಯಪಟ್ಟಿದೆ.







