ಯಾವುದೇ ಖಾತೆ ಕೊಟ್ಟರೂ ನಿಭಾಯಿಸುವೆ: ಸಚಿವ ಬಿ.ಸಿ.ಪಾಟೀಲ್

ಬೆಂಗಳೂರು, ಆ. 5: `ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಲ್ಲಿ ತನಗೆ ಯಾವುದೇ ಖಾತೆ ಕೊಟ್ಟರೂ ಅದನ್ನು ಸಮರ್ಥವಾಗಿ ನಿಭಾಯಿಸುವೆ' ಎಂದು ಹಾವೇರಿ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಗುರುವಾರ ನಗರದಲ್ಲಿ ಹಾವೇರಿ ಜಿಲ್ಲೆಗೆ ತೆರಳುವ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಈಗಾಗಲೇ ಕೃಷಿ ಸಚಿವನಾಗಿ ಕೆಲಸ ಮಾಡಿದ್ದು, ಮತ್ತೆ ಕೃಷಿ ಖಾತೆ ಕೊಟ್ಟರೂ ಸಂತೋಷ. ಇಲಾಖೆಯಲ್ಲಿ ಈಗಾಗಲೇ ಹಲವು ಪ್ರಗತಿಪರ ರೈತಪರ ಕೆಲಸಗಳನ್ನು ಮಾಡಿದ್ದು, ಇನ್ನೊಂದಿಷ್ಟು ಸಾಧನೆ ಮಾಡಬೇಕಿದೆ. ಅದೇನೇ ಇರಲಿ ಯಾವುದೇ ಖಾತೆ ಕೊಟ್ಟರೂ ಶ್ರದ್ಧೆ, ನಿಷ್ಠೆಯಿಂದ ನಿಭಾಯಿಸುತ್ತೇನೆಂಬ ಭರವಸೆಯಿದೆ' ಎಂದರು.
`ಸದ್ಯಕ್ಕಿನ್ನೂ ಇಂತಹದ್ದೇ ಖಾತೆ ಎಂದು ನಿಕ್ಕಿಯಾಗಿಲ್ಲ. ಯಾವುದೇ ಇಲಾಖೆ ಕೊಟ್ಟರೂ ಪ್ರಗತಿ ಪರವಾಗಿ ಮಾಡುತ್ತೇನೆ. ಹಾವೇರಿ ಜಿಲ್ಲೆಯ ಮೇಲ್ಮನೆ ಸದಸ್ಯ ಆರ್.ಶಂಕರ್ ಗೆ ಸಚಿವ ಸ್ಥಾನ ನೀಡದ ಬಗ್ಗೆ ಯಾವುದೇ ಬೇಸರವಿಲ್ಲ. ಅದರಂತೆ ಪಕ್ಷದಲ್ಲಿ ಯಾವುದೇ ಅಸಮಾಧಾನವೂ ಇಲ್ಲ. ಏನೇ ಇದ್ದರೂ ವರಿಷ್ಠರು ಅದೆಲ್ಲವನ್ನೂ ಸರಿಪಡಿಸುತ್ತಾರೆಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.





