ಕೇರಳದಿಂದ ಕರ್ನಾಟಕಕ್ಕೆ ಪ್ರಯಾಣ ನಿರ್ಬಂಧ ಕೇಂದ್ರ ಸರಕಾರದ ನಿರ್ದೇಶನಕ್ಕೆ ವಿರುದ್ಧ: ಪಿಣರಾಯಿ ವಿಜಯನ್

ತಿರುವನಂತಪುರ, ಆ. 5: ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಿಂದ ವ್ಯಕ್ತಿಗಳ ಪ್ರಯಾಣದ ಮೇಲೆ ಕರ್ನಾಟಕ ಸರಕಾರ ನಿರ್ಬಂಧ ಹೇರಿದ ದಿನಗಳ ಬಳಿಕ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ, ಈ ನಿರ್ಬಂಧಗಳು ಕೇಂದ್ರ ಸರಕಾರದ ನಿರ್ದೇಶನಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ.
ಕೇಂದ್ರ ಸರಕಾರದ ಸಚಿವಾಲಯ ಹೊರಡಿಸಿದ ಆದೇಶ ಪ್ರಕಾರ ರಾಜ್ಯಗಳು ತಮ್ಮ ಗಡಿಗಳನ್ನು ಮುಚ್ಚುವ ಮೂಲಕ ಸಂಚಾರದ ಮೇಲೆ ನಿರ್ಬಂಧ ಹೇರುವಂತಿಲ್ಲ ಎಂದು ಅವರು ಹೇಳಿದ್ದಾರೆ. ‘‘ಕೇಂದ್ರ ಸರಕಾರದ ನಿರ್ದೇಶನಕ್ಕೆ ವಿರುದ್ಧವಾಗಿ ಕರ್ನಾಟಕ ಸರಕಾರ ನೂತನ ನಿರ್ಬಂಧಗಳನ್ನು ಹೇರಿದೆ’’ ಎಂದು ಅವರು ವಿಧಾನಸಭೆಯಲ್ಲಿ ಹೇಳಿದರು. ಶಾಸಕ ಎ.ಕೆ.ಎಂ. ಅಶ್ರಫ್ (ಐಯುಎಂಎಲ್) ಅವರ ಪ್ರತಿಪಾದನೆಗೆ ಪ್ರತಿಕ್ರಿಯಿಸಿದ ಅವರು, ವಿವಿಧ ಉದ್ದೇಶಗಳಿಗಾಗಿ ನೆರೆಯ ರಾಜ್ಯಕ್ಕೆ ಪ್ರಯಾಣಿಸುವ ರಾಜ್ಯದ ಜನರಿಗೆ ನಿರ್ಬಂಧದಿಂದ ಯಾವುದೇ ತೊಂದರೆಗಳು ಉಂಟಾಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಇದಕ್ಕೆ ಸಂಬಂಧಿಸಿ ಅಗತ್ಯದ ಕ್ರಮಗಳನ್ನು ತೆಗೆದುಕೊಳ್ಳಲು ಕರ್ನಾಟಕ ಸರಕಾರದ ಸಂಬಂಧಿತರನ್ನು ರಾಜ್ಯ ಡಿಜಿಪಿ ಅನಿಲ್ ಕಾಂತ್ ಅವರು ಈಗಾಗಲೇ ಸಂಪರ್ಕಿಸಿ ಮಾತುಕತೆ ನಡೆಸಿದ್ದಾರೆ ಎಂದು ಅವರು ತಿಳಿಸಿದರು. ಕರ್ನಾಟಕ ರಾಜ್ಯಾ ಜಾರಿಗೊಳಿಸಿದ ನಿರ್ಬಂಧಗಳ ವಿವರ ನೀಡಿದ ಪಿಣರಾಯಿ ವಿಜಯನ್, ಕೇರಳದ ಪ್ರಯಾಣಿಕರಿಗೆ 72 ಗಂಟೆಗಳ ಒಳಗೆ ಪಡೆದ ಆರ್‌ಟಿ-ಪಿಸಿಆರ್ ಕೋವಿಡ್‌ಗೆ ನೆಗೆಟಿವ್ ಪ್ರಮಾಣ ಪತ್ರವನ್ನು ಕರ್ನಾಟಕ ಸರಕಾರ ಕಡ್ಡಾಯಗೊಳಿಸಿದೆ ಎಂದರು.





