ಪಾಂಡವಪುರ: ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಅಡ್ಡಿ; ಆರೋಪ
ಜಮೀನು ದಾನ ನೀಡಿದ ಸ್ಥಳದಲ್ಲೇ ಟ್ಯಾಂಕ್ ನಿರ್ಮಾಣಕ್ಕೆ ವೃದ್ಧ ದಂಪತಿ ಒತ್ತಾಯ

ಪಾಂಡವಪುರ, ಆ.5: ರಾಜಕೀಯ ಕಾರಣದಿಂದ ತಾಲೂಕಿನ ಚಿಟ್ಟನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ವ್ಯಕ್ತಿಯೊಬ್ಬರು ಅಡ್ಡಿಪಡಿಸುತ್ತಿದ್ದು, ನಿಗದಿತ ಸ್ಥಳದಲ್ಲೇ ಟ್ಯಾಂಕ್ ನಿರ್ಮಿಸಬೇಕೆಂದು ಜಮೀನು ದಾನ ನೀಡಿರುವ ವೃದ್ಧ ದಂಪತಿ ಹಾಗೂ ಗ್ರಾಮಸ್ಥರು ಶಾಸಕ ಸಿ.ಎಸ್.ಪುಟ್ಟರಾಜು ಅವರನ್ನು ಒತ್ತಾಯಿಸಿದ್ದಾರೆ.
ಚಿಟ್ಟನಹಳ್ಳಿ ಗ್ರಾಮದಲ್ಲಿನ ಹಳೆಯ ನೀರಿನ ಟ್ಯಾಂಕ್ ಶಿಥಿಲವಾಗಿದ್ದು, ಸರಕಾರ 50 ಸಾವಿರ ಲೀಟರ್ ಸಾಮಥ್ರ್ಯದ ಹೊಸ ಟ್ಯಾಂಕ್ ನಿರ್ಮಾಣಕ್ಕೆ ಪಂಚಾಯತ್‍ರಾಜ್ ಇಲಾಖೆ ಮೂಲಕ ಹಣ ಮಂಜೂರು ಮಾಡಿದ್ದು, ಗುತ್ತಿಗೆಯನ್ನೂ ನೀಡಿ ಕೆಲಸ ಕೂಡ ಪ್ರಾರಂಭಿಸಲು ಮುಂದಾಯಿತು. ಆದರೆ, ಗ್ರಾಮದಲ್ಲಿ ಟ್ಯಾಂಕ್ ನಿರ್ಮಾಣಕ್ಕೆ ಸೂಕ್ತ ಸರಕಾರಿ ಭೂಮಿ ಸಿಗದಿದ್ದ ಕಾರಣ ಗ್ರಾಮದ ಚಿಕ್ಕದೇವಮ್ಮ-ಕೃಷ್ಣೇಗೌಡ ಎಂಬ ವೃದ್ಧ ದಂಪತಿಗೆ ಸೇರಿದ ಒಂದು ಗುಂಟೆ ಜಮೀನು ಗ್ರಾಮದಿಂದ ಸುಮಾರು 25 ಅಡಿ ಎತ್ತರದಲ್ಲಿದ್ದು ಟ್ಯಾಂಕ್ ನಿರ್ಮಿಸಲು ಸೂಕ್ತವಾಗಿದೆ.
ಅದನ್ನು ಕೊಡಿಸಿಕೊಡಿ ಎಂದು ಕುಡಿಯುವ ನೀರು ಸರಬರಾಜು ಯೋಜನೆ ಸಹಾಯಕ ಕಾರ್ಯಪಾಲಕ ಅಭಿಯಂತರ ಸಾಮವೆಲ್ ಹೇಳಿದ್ದರಿಂದ ಗ್ರಾಮಸ್ಥರು ವೃದ್ಧ ದಂಪತಿಗೆ ಜಮೀನು ನೀಡುವಂತೆ ಕೋರಿದ್ದರು.
ಈ ವೇಳೆ ಚಿಟ್ಟನಹಳ್ಳಿ ಗ್ರಾಮದ ಸರ್ವೆ ನಂಬರ್ 207/5 ರಲ್ಲಿ ಕೇವಲ 11 ಕುಂಟೆ ಜಮೀನು ಹೊಂದಿದ್ದ ಚಿಕ್ಕದೇವಮ್ಮ-ಕೃಷ್ಣೇಗೌಡ ದಂಪತಿಗಳು ಗ್ರಾಮದ ಜನರಿಗೆ ಕುಡಿಯುವ ನೀರು ದೊರೆಯಲಿ ಎಂಬ ಮಹತ್ವಾಕಾಂಕ್ಷೆಯಿಂದ ತಮ್ಮ ಜಮೀನಿನಲ್ಲಿದ್ದ ಬೇವು, ತೆಂಗು ಮತ್ತಿತರ ಮರಗಳನ್ನು ಕಡಿದು ಟ್ಯಾಂಕ್ ನಿರ್ಮಿಸಲು ಬೆಲೆಬಾಳುವ 1 ಕುಂಟೆ ಜಮೀನನ್ನು ರಾಜ್ಯಪಾಲರ ಹೆಸರಿಗೆ ದಾನವಾಗಿ ಬರೆದುಕೊಟ್ಟಿದ್ದಾರೆ. ಬಳಿಕ ಗುತ್ತಿಗೆದಾರರು ಟ್ಯಾಂಕ್ ನಿರ್ಮಿಸಲು ಕಾಮಗಾರಿ ಪ್ರಾರಂಭಿಸಿ ಪಾಯ ಮುಚ್ಚುವ ಹೊತ್ತಿಗೆ ಗ್ರಾಮದ ಪಾಪಣ್ಣ ಎಂಬ ವ್ಯಕ್ತಿ ಖ್ಯಾತೆ ತೆಗೆದು ಟ್ಯಾಂಕ್ ನಿರ್ಮಾಣಕ್ಕೆ ಅಡ್ಡಿಪಡಿಸಿದ್ದು, ಬೇರೆ ಸ್ಥಳದಲ್ಲಿ ಟ್ಯಾಂಕ್ ನಿರ್ಮಿಸುವಂತೆ ಅಭಿಯಂತರರ ಮೇಲೆ ರಾಜಕೀಯ ಪ್ರಭಾವ ಬೀರಿದ ಕಾರಣ ಅಭಿಯಂತರರು ಸ್ಥಳ ಬದಲಾವಣೆಗೆ ಮುಂದಾಗಿದ್ದರಿಂದ ಗ್ರಾಮಸ್ಥರು ಕುಪಿತರಾಗಿದ್ದಾರೆ.
`ಇಂಜಿನಿಯರ್ ಸಾಮವೆಲ್ ಸ್ಥಳ ಪರಿಶೀಲನೆ ನಡೆಸಿ ವೃದ್ಧ ದಂಪತಿಯಿಂದ ಜಮೀನು ದಾನ ಪಡೆದು ಭೂಮಿ ಪೂಜೆ ನಡೆಸಿ ಕಾಮಗಾರಿಯೂ ಆರಂಭವಾದ ಬಳಿಕ ಇಲ ಸಲ್ಲದ ಸಬೂಬು ಹೇಳುತ್ತಿರುವುದು ಸರಿಯಲ್ಲ. ನಿಗದಿತ ಸ್ಥಳದಲ್ಲೆ ಟ್ಯಾಂಕ್ ನಿರ್ಮಾಣ ಮಾಡಬೇಕು. ಟ್ಯಾಂಕ್ ಬಳಿ ಹೋಗಲು ರಸ್ತೆ ಮತ್ತು ಪೈಪ್‍ಲೈನ್ ಅಳವಡಿಸಲು ಇಲ್ಲಿ ಯಾವುದೇ ತೊಂದರೆ ಇಲ್ಲ. ಕೇವಲ ರಾಜಕೀಯ ಕಾರಣಗಳಿಂದ ಈ ರೀತಿ ವರ್ತಿಸುವುದು ಸರಿಯಲ್ಲ. ಇದರಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಜಮೀನು ದಾನ ನೀಡಿರುವ ವೃದ್ಧ ದಂಪತಿ ಮನಸ್ಸು ನೋಯಿಸಬಾರದು. ನಿಗದಿತ ಸ್ಥಳದಲ್ಲೆ ಟ್ಯಾಂಕ್ ನಿರ್ಮಿಸಬೇಕು' ಎಂದು ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಚಿಟ್ಟನಹಳ್ಳಿ ಮಹೇಶ್ ಮಾತನಾಡಿ, ಗ್ರಾಮದಲ್ಲಿ ಟ್ಯಾಂಕ್ ನಿರ್ಮಿಸಲು ಸೂಕ್ತ ಸ್ಥಳ ಸಿಗದಿದ್ದ ಕಾರಣ ದಾನ ನೀಡಲು ಮುಂದೆ ಬಂದಿರುವ ಚಿಕ್ಕದೇವಮ್ಮ-ಕೃಷ್ಣೇಗೌಡರ ಜಮೀನಿನಲ್ಲಿ ನೀರಿನ ಟ್ಯಾಂಕ್ ನಿರ್ಮಿಸುವ ಬಗ್ಗೆ ಶಾಸಕ ಸಿ.ಎಸ್.ಪುಟ್ಟರಾಜು ಅವರಿಗೆ ದಾಖಲಾತಿ ಸಮೇತ ಮಾಹಿತಿ ನೀಡಲಾಗಿತ್ತು. ಅವರ ಒಪ್ಪಿಗೆ ಮೇರೆಗೆ ಇಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ. ಈಗ ಗ್ರಾಮದ ಪಾಪಣ್ಣ ಎಂಬವರು ನಿರ್ಮಾಣಕ್ಕೆ ಅಡ್ಡಿ ಪಡಿಸುತ್ತಿದ್ದಾರೆ. ಈ ಬಗ್ಗೆ ಶಾಸಕರು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಕೋರಿದರು.
ಈ ವೇಳೆ ಗ್ರಾಮದ ಮುಖಂಡರಾದ ಜಿ.ಬೆಟ್ಟೇಗೌಡ, ವಾಲೆಕಾರ್ ಸೋಮೇಗೌಡ, ಸಿ.ಎಸ್.ಶಿವಣ್ಣ, ಲಕ್ಷ್ಮಿ ನಿಂಗರಾಜು, ರೈತಸಂಘದ ಮುಖಂಡರಾದ ಶ್ಯಾದನಹಳ್ಳಿ ಚಲುವರಾಜು, ವೈ.ಪಿ.ಮಂಜುನಾಥ್, ವೈ.ಜಿ.ರಘು ಇತರರಿದ್ದರು.








