ವಿಶೇಷ ಸ್ಥಾನಮಾನವನ್ನು ಕಳೆದುಕೊಂಡ ಎರಡು ವರ್ಷಗಳ ಬಳಿಕ ಜಮ್ಮು-ಕಾಶ್ಮೀರದಲ್ಲಿ ಏನು ಸ್ಥಿತಿಯಿದೆ?

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಆ.5: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಸಂವಿಧಾನದ ವಿಧಿ 370ರಡಿ ಜಮ್ಮು-ಕಾಶ್ಮೀರವು ಹೊಂದಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಇಂದಿಗೆ ಭರ್ತಿ ಎರಡು ವರ್ಷಗಳು ಪೂರ್ಣಗೊಂಡಿವೆ. ಹೇಗಿದೆ ಇಂದು ಕಾಶ್ಮೀರದಲ್ಲಿಯ ಸ್ಥಿತಿ? ಈ ಬಗ್ಗೆ ಸುದ್ದಿ ಜಾಲತಾಣ thequint.comನ ವರದಿಯಂತೆ ಆರ್ಥಿಕ ಸಂಕಷ್ಟ ಮತ್ತು ನಿರುದ್ಯೋಗದಿಂದ ಕಾಶ್ಮೀರವು ತತ್ತರಿಸಿದೆ.
2019,ಆ.5ರಂದು ಭಾರತೀಯ ಸಂಸತ್ತು ಸಂವಿಧಾನದ 370 ಮತ್ತು 35ಎ ವಿಧಿಗಳನ್ನು ರದ್ದುಗೊಳಿಸುವ ಮೂಲಕ ಜಮ್ಮು-ಕಾಶ್ಮೀರ ರಾಜ್ಯದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡು ಅದನ್ನು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಹೀಗೆ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿತ್ತು. ಈ ಐತಿಹಾಸಿಕ ಕ್ರಮದ ಬಳಿಕ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದರಿಂದ ಜಮ್ಮು-ಕಾಶ್ಮೀರವು ಅಕ್ಷರಶಃ ಇತರ ಜಗತ್ತಿನೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತ್ತು. ಹಲವಾರು ಪ್ರತಿಪಕ್ಷ ನಾಯಕರನ್ನು ಗೃಹಬಂಧನದಲ್ಲಿರಿಸಲಾಗಿತ್ತು. ಸಾವಿರಾರು ರಾಜಕೀಯ ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಜೈಲಿಗೆ ತಳ್ಳಲಾಗಿತ್ತು. ಆದರೆ ಅತ್ಯಂತ ದೊಡ್ಡ ಹೊಡೆತ ರಾಜ್ಯದ ಆರ್ಥಿಕತೆಗೆ ಬಿದ್ದಿತ್ತು.
ಜನರು ಹತಾಶರಾಗಿದ್ದಾರೆ. ಕೇಂದ್ರ ಸರಕಾರದ ಕ್ರಮದಿಂದ ಯಾವುದೇ ಲಾಭವಾಗಿಲ್ಲ. ಬದಲು ಮೊದಲೇ ಹದಗೆಟ್ಟಿದ್ದ ಪರಿಸ್ಥಿತಿ ಈಗ ಇನ್ನಷ್ಟು ಕೆಟ್ಟದ್ದಾಗಿದೆ ಎಂದು ಕಾಶ್ಮೀರದ ಮಹಿಳಾ ವ್ಯಾಪಾರಿಯೋರ್ವರು ಸಂಕಟವನ್ನು ವ್ಯಕ್ತಪಡಿಸಿದರು.
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ ಹಲವಾರು ತಿಂಗಳುಗಳ ಕಾಲ ಪ್ರವಾಸೋದ್ಯಮವು ಸಂಪೂರ್ಣವಾಗಿ ನೆಲ ಕಚ್ಚಿತ್ತು. ನಂತರ ಪ್ರವಾಸಿಗಳು ಆಗಮಿಸುತ್ತಿದ್ದಾಗಲೇ ಕೊರೋನ ವೈರಸ್ ಸಾಂಕ್ರಾಮಿಕವು ಅಪ್ಪಳಿಸುವ ಮೂಲಕ ಪ್ರತಿಯೊಂದೂ ಚಟುವಟಿಕೆ ಮತ್ತೆ ಸ್ಥಗಿತೊಂಡಿತ್ತು.
"2019ರವರೆಗೂ ಪ್ರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಹೋಟೆಲ್ ಗಳು, ಬೋಟ್ ಹೌಸ್ ಗಳು, ಶಿಕಾರಾಗಳು, ಪ್ರವಾಸ ಆಯೋಜಕರು, ಗೈಡ್ಗಳು, ಸಾರಿಗೆ ಸೇವೆಗಳು ಇತ್ಯಾದಿ ಸೇರಿದಂತೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಾವಿರಾರು ಜನರು ಉದ್ಯೋಗಗಳನ್ನು ಕಂಡುಕೊಂಡಿದ್ದರು. ಡ್ರೈಫ್ರುಟ್, ಕರಕುಶಲ ವಸ್ತುಗಳು ಇತ್ಯಾದಿಗಳಂತಹ ಹಲವಾರು ಇತರ ಉದ್ಯಮಗಳೂ ಪರೋಕ್ಷವಾಗಿ ಪ್ರವಾಸೋದ್ಯಮವನ್ನೇ ಅವಲಂಬಿಸಿಕೊಂಡಿದ್ದವು. ಈ ಕ್ಷೇತ್ರಗಳೊಂದಿಗೆ ಗುರುತಿಸಿಕೊಂಡಿದ್ದ ಎಲ್ಲ ಜನರೂ ಇಂದು ನಿರುದ್ಯೋಗಿಗಳಾಗಿದ್ದಾರೆ. ನಾನು ನನ್ನ ಹೋಟೆಲ್ ನ ಶೇ.95ರಷ್ಟು ಸಿಬ್ಬಂದಿಗಳನ್ನು ಕೆಲಸದಿಂದ ತೆಗೆಯುವುದು ಅನಿವಾರ್ಯವಾಗಿತ್ತು. ಅವರ ಕುಟುಂಬಗಳಿಗೆ ನಾವು ಏನು ಉತ್ತರ ನೀಡಬೇಕು" ಎಂದು ಶ್ರೀನಗರದ ಹೋಟೆಲ್ ಒಂದರ ಮ್ಯಾನೇಜರ್ ಮತ್ತು ಟೂರ್ ಆಪರೇಟರ್ ಝುಲ್ಫಿಕರ್ ಅಲಿ ಪ್ರಶ್ನಿಸಿದರು.
ತಳ ಕಚ್ಚಿರುವ ಸಾರಿಗೆ ಉದ್ಯಮ ಕ್ಷೇತ್ರ
"ಇಂದು ದಿನಕ್ಕೆ 250 ರೂ.ಗಳನ್ನು ಗಳಿಸುವುದೂ ಕಷ್ಟವಾಗಿದೆ. ಇಷ್ಟೊಂದು ಅಲ್ಪಾದಾಯದಲ್ಲಿ ನಾನು ನನ್ನ ಕುಟುಂಬವನ್ನು ನಿರ್ವಹಿಸುವುದು ಹೇಗೆ? ನಾನು ಸಾಲದ ಕೂಪದಲ್ಲಿ ಸಿಲುಕಿದ್ದೇನೆ, ನನ್ನ ಮಕ್ಕಳನ್ನು ದುಡಿಮೆಗೆ ತಳ್ಳುವುದು ನನಗೆ ಅನಿವಾರ್ಯವಾಗಿದೆ. ಡೀಸೆಲ್ ಬೆಲೆಗಳು ಈಗಾಗಲೇ ಗಗನ ಮುಟ್ಟಿವೆ. ಹಲವಾರು ವಾಹನ ಚಾಲಕರು ಇಂದು ಕಾರ್ಮಿಕರಾಗಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದಾರೆ" ಎಂದು ಬಸ್ ಚಾಲಕ ನಝೀರ್ ಅಹ್ಮದ್ ಗೋಳು ತೋಡಿಕೊಂಡರು.
ಉದ್ಯಮಗಳಿಗೆ ಭವಿಷ್ಯದ ಕುರಿತು ಅನಿಶ್ಚಿತತೆ
‘ಉದ್ಯಮಗಳು ಭವಿಷ್ಯದ ಕುರಿತು ಅನಿಶ್ಚಿತತೆಯನ್ನು ಎದುರಿಸುತ್ತಿವೆ. ಕಚ್ಚಾ ವಸ್ತುಗಳನ್ನು ಖರೀದಿಸಬೇಕೇ ಬೇಡವೇ ಎಂಬ ಬಗ್ಗೆ ನಾವು ತೀವ್ರ ಗೊಂದಲದಲ್ಲಿದ್ದೇವೆ. ನಾಳೆ ಯಾವ ಸ್ಥಿತಿ ಇರಲಿದೆ ಎನ್ನುವುದು ನಮಗೆ ಗೊತ್ತಿಲ್ಲ ’ಎಂದು ಮಹಿಳಾ ಉದ್ಯಮಿಯೋರ್ವರು ಕಳವಳ ವ್ಯಕ್ತಪಡಿಸಿದರು.
"ವಾಕ್ ಸ್ವಾತಂತ್ರವನ್ನು ಹತ್ತಿಕ್ಕಲಾಗಿದೆ"
ಸಂಕಷ್ಟದಲ್ಲಿರುವ ಆರ್ಥಿಕತೆಯ ನಡುವೆ ಕಾಶ್ಮೀರಿಗಳು ತಮ್ಮ ಕಳವಳಗಳ ಬಗ್ಗೆ ಧ್ವನಿಯೆತ್ತಿದರೆ ಜೈಲುಪಾಲಾಗವ ಭೀತಿಯಲ್ಲಿದ್ದಾರೆ.
‘ನಾವು ಇಲ್ಲಿ ಜನತಾ ಆಡಳಿತವನ್ನು ಹೊಂದಿಲ್ಲ. ಆದರೂ ನಾವು ರಾಜ್ಯಪಾಲರ ಆಡಳಿತದಡಿ ಇದ್ದೇವೆ. ನಮ್ಮ ಅಭಿಪ್ರಾಯಗಳು ಮತ್ತು ಸಮಸ್ಯೆಗಳನ್ನು ಯಾರೂ ಆಲಿಸುತ್ತಿಲ್ಲ. 2020ರಲ್ಲಿ ಹೊಸ ಮಾಧ್ಯಮ ನೀತಿಯ ಜಾರಿಯ ಬಳಿಕ ಇಡೀ ಮಾಧ್ಯಮ ಕ್ಷೇತ್ರವು ಸಂಕಷ್ಟದಲ್ಲಿದೆ. ಯಾರನ್ನಾದರೂ ಯಾವುದೇ ಸಮಯದಲ್ಲಿ ಜೈಲಿಗೆ ತಳ್ಳುವ ಅಧಿಕಾರವನ್ನು ಸರಕಾರವು ಹೊಂದಿರುವುದರಿಂದ ಪತ್ರಕರ್ತರು ಸತ್ಯವನ್ನು ಬರೆಯುವ ಸ್ಥಿತಿಯಲ್ಲಿಲ್ಲ. ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ ಹಲವಾರು ಮಾಧ್ಯಮ ಸಂಸ್ಥೆಗಳು ಮುಚ್ಚಿವೆ ’ಎಂದು ಶ್ರೀನಗರದ ಪತ್ರಕರ್ತ ಸಜಾದ್ ಗುಲ್ ಹೇಳಿದರು.
ಮಾನಸಿಕ ಯಾತನೆಯಲ್ಲಿ ಯುವಜನಾಂಗ
ಕಳೆದೆರಡು ವರ್ಷಗಳಿಂದಲೂ ಯುವಜನತೆ ಮನೆಗಳಲ್ಲಿಯೇ ಬಂದಿಗಳಂತಾಗಿದ್ದು,ಇದು ಹಲವಾರು ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ‘ಕಾಶ್ಮೀರದ ಸುಮಾರು ಶೇ.45ರಷ್ಟು ಯುವಜನರು ಮಾನಸಿಕ ಯಾತನೆಯನ್ನು ಅನುಭವಿಸುತ್ತಿದ್ದಾರೆ ಮತ್ತು ಬೇರೆಲ್ಲೂ ಇಂತಹ ಬೆಳವಣಿಗೆ ಕಂಡುಬರುತ್ತಿಲ್ಲ ಎಂದು ಅಮೆರಿಕದ ಜರ್ನಲ್ವೊಂದು ಇತ್ತೀಚಿಗೆ ವರದಿ ಮಾಡಿದೆ. ಅವರಲ್ಲಿ ಮನೆಮಾಡಿರುವ ಬೇಸರ ಮತ್ತು ಅವರ ಚಟುವಟಿಕೆಗಳು ಮೊಟಕುಗೊಂಡಿರುವುದು ಇದಕ್ಕೆ ಕಾರಣ’ ಎಂದು ಸ್ನಾತಕೋತ್ತರ ವಿದ್ಯಾರ್ಥಿ ಬಾಸಿತ್ ಜಮಾಲ್ ಹೇಳಿದರು.







