ಲೆಬನಾನ್‌ಗೆ 100 ಮಿಲಿಯನ್ ಡಾಲರ್ ನೆರವು: ಬೈಡೆನ್ ಘೋಷಣೆ
ವಾಷಿಂಗ್ಟನ್, ಆ.5: ತೀವ್ರ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಲೆಬನಾನ್‌ಗೆ 100 ಮಿಲಿಯನ್ ಡಾಲರ್ ನೆರವು ಒದಗಿಸುವುದಾಗಿ ಘೋಷಿಸಿರುವ ಅಮೆರಿಕದ ಅಧ್ಯಕ್ಷ ಜೋ ಬೈಡೆನ್, ಲೆಬನಾನ್‌ನಲ್ಲಿ ಸುಧಾರಣಾ ಪ್ರಕ್ರಿಯೆ ಶೀಘ್ರ ಆರಂಭವಾಗಬೇಕು ಎಂದು ಆಗ್ರಹಿಸಿದ್ದಾರೆ.
ಕಳೆದ 2 ವರ್ಷಗಳಲ್ಲಿ ಲೆಬನಾನ್‌ಗೆ ಮಾನವೀಯ ನೆಲೆಯಲ್ಲಿ ಒದಗಿಸಿರುವ 560 ಮಿಲಿಯನ್ ಡಾಲರ್ ನೆರವಿಗೆ ಹೆಚ್ಚುವರಿಯಾಗಿ ಈ ನೆರವು ಒದಗಿಸಲಾಗುವುದು ಎಂದು , ಫ್ರಾನ್ಸ್ ನೇತೃತ್ವದಲ್ಲಿ ನಡೆದ ‘ಲೆಬನಾನ್‌ಗೆ ಆರ್ಥಿಕ ನೆರವು’ ಸಮ್ಮೇಳನದಲ್ಲಿ ಬೈಡೆನ್ ಹೇಳಿದ್ದಾರೆ. ಆದರೆ ಲೆಬನಾನ್ ಮುಖಂಡರು ಆರ್ಥಿಕ ಸುಧಾರಣೆ ಮತ್ತು ಭ್ರಷ್ಟಾಚಾರ ನಿಗ್ರಹದ ನಿಟ್ಟಿನಲ್ಲಿ ಕಠಿಣ ಆದರೆ ಅಗತ್ಯದ ಉಪಕ್ರಮಗಳನ್ನು ಆರಂಭಿಸದಿದ್ದರೆ ವಿದೇಶದ ನೆರವು ಫಲಪ್ರದವಾಗದು. ಈ ಉಪಕ್ರಮ ಅತ್ಯಗತ್ಯ ಮತ್ತು ಈಗಿಂದಲೇ ಆರಂಭವಾಗಬೇಕು. ಸಮಯ ವ್ಯರ್ಥವಾಗಬಾರದು. ನೀವಿದನ್ನು ಮಾಡಿದರೆ ನಾವು ನೆರವಾಗುತ್ತೇವೆ ಎಂದವರು ಹೇಳಿದರು.
ಲೆಬನಾನ್ ರಾಜಧಾನಿ ಬೆರೂತ್‌ನ ಬಂದರಿನಲ್ಲಿ ನಡೆದ ಭೀಕರ ಸ್ಫೋಟದಲ್ಲಿ ಕನಿಷ್ಟ 214 ಮಂದಿ ಮೃತಪಟ್ಟ ದುರಂತದ ವಾರ್ಷಿಕಾಚರಣೆಯ ಸಂದರ್ಭ ಈ ಸಮ್ಮೇಳನ ನಡೆಯುತ್ತಿದ್ದು, ದುರಂತದಲ್ಲಿ ಸಂತ್ರಸ್ತರಾದವರ ಕುಟುಂಬಗಳಿಗೆ ಸಮ್ಮೇಳನದಲ್ಲಿ ಪಾಲ್ಗೊಂಡ ವಿಶ್ವನಾಯಕರು ಶ್ರದ್ಧಾಂಜಲಿ ಸಲ್ಲಿಸಿದರು.





