ಶಿವಮೊಗ್ಗ: ಕೇಂದ್ರ ಸರಕಾರ, ರಾಜ್ಯ ಬಿಜೆಪಿ ಸಂಸದರ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ

ಶಿವಮೊಗ್ಗ,ಆ.೦4: ರೈತರ, ಕಾರ್ಮಿಕರ ಜನಸಾಮಾನ್ಯನ ವಿರೋಧಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಹಾಗೂ ರಾಜ್ಯದ ಪರವಾಗಿ ಸಂಸತ್ತಿನಲ್ಲಿ ತುಟಿಬಿಚ್ಚದ ಬಿಜೆಪಿ ಸಂಸದರುಗಳ ಮೌನ ನಡೆಯನ್ನು ಖಂಡಿಸಿ ಯುವ ಕಾಂಗ್ರೆಸ್ ನಿಂದ ಸಂಸದರ ಮನೆ ಮುತ್ತಿಗೆ ಹಾಕಲು ಯತ್ನಿಸಿದರು.
ಸಂಸದರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಸುಮಾರು ೭೫ ಕ್ಕೂ ಹೆಚ್ಚು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.ಪೆಟ್ರೋಲ್ - ಡೀಸೆಲ್ ಬೆಲೆ,ಗ್ಯಾಸ್ ಸಿಲಿಂಡರ್ ದರ , ಅಗತ್ಯವಸ್ತುಗಳ ಬೆಲೆ ಏರಿಕೆ, ನೆರೆ ಪರಿಹಾರ , ರಾಜ್ಯಕ್ಕೆ ಬರಬೇಕಾದ ಜಿ.ಎಸ್.ಟಿ,ಕೊರೋನ ನಿರ್ವಹಣೆಯಲ್ಲಿ, ಕೋವಿಡ್ ಲಸಿಕೆ ನೀಡುವದರಲ್ಲಿ, ವಿಫಲವಾಗಿರುವುದನ್ನು ಮತ್ತು ಶಿವಮೊಗ್ಗ ಜಿಲ್ಲೆಯ ಸಂಸದರು ಸೇರಿ ರಾಜ್ಯದ ಎಲ್ಲ ಬಿಜೆಪಿ ಸಂಸದರು ಸಂಸತ್ತಿನಲ್ಲಿ ರಾಜ್ಯದ ಪರವಾಗಿ ಧ್ವನಿ ಎತ್ತದೆ ಮೌನವಹಿಸಿರುವುದು, ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಕಾಯ್ದೆಯ ಮುಖಾಂತರ ಮೀಟರ್ ಅಳವಡಿಸುವ ಹಾಗೂ ರೈತರ, ಕಾರ್ಮಿಕರ ಶ್ರೀಸಾಮಾನ್ಯನ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಅಚ್ಚೆ ದಿನ್ ತರುತ್ತೇನೆಂದು ಅಧಿಕಾರಕ್ಕೆ ಬಂದ ಕೇಂದ್ರ ಬಿಜೆಪಿ ಸರ್ಕಾರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆ ಕಡಿಮೆ ಇದ್ದರೂ ದಿನನಿತ್ಯ ಪೆಟ್ರೋಲ್ - ಡೀಸೆಲ್, ಅಡುಗೆ ಅನಿಲ ದರ ಏರಿಕೆ ಮಾಡುತ್ತಾ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಗಳು ಕೂಡ ಏರಿಕೆ ಕಂಡು ಜನಸಮಾನ್ಯರು ಪರದಾಡುವಂತಾಗಿದೆ, ಕೋವಿಡ್ ಸಂಕಷ್ಟದಲ್ಲಿರುವ ದೇಶದ ಜನತೆಯ ನೆರವಿಗೆ ಬರಬೇಕಾದ ಸರ್ಕಾರ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಕೊರೋನಾ ನಿರ್ವಹಣೆಯಲ್ಲಿ ಹಾಗೂ ಕೋವಿಡ್ ಲಸಿಕೆ ನೀಡುವುದರಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಹಾಗೆಯೇ ಪೆಗಾಸಸ್ ಫೋನ್ ಕದ್ದಾಲಿಕೆಯಲ್ಲಿ ನೇರವಾಗಿ ಶಾಮೀಲಾಗಿರುವುದು ಎದ್ದು ತೋರುತ್ತಿದ್ದು, ಕೇಂದ್ರ ಗುಪ್ತಚರ ಇಲಾಖೆಯು ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ದೂರಿದರು.
ಈಗಾಗಲೇ ರೈತ ಹಾಗೂ ಕಾರ್ಮಿಕ ವಿರೋಧಿ ಅವೈಜ್ಞಾನಿಕ ಕಾಯ್ದೆಗಳನ್ನು ಜಾರಿಗೊಳಿಸುತ್ತಿದ್ದು, ಜೊತೆಗೆ ಈಗಾಗಲೇ ವಿದ್ಯುತ್ ಕಾಯ್ದೆ ಮಸೂದೆ ತಿದ್ದುಪಡಿ ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸುವ ನೀತಿಯನ್ನು ಜಾರಿಗೆ ತರಲು ಹೊರಟಿರುವುದು ಹಾಗೂ ಕರ್ನಾಟಕ ರಾಜ್ಯಕ್ಕೆ ನೆರೆ ಪರಿಹಾರ, ಜಿ.ಎಸ್.ಟಿ ತೆರಿಗೆಯಿಂದ ಬರಬೇಕಾದ ಪರಿಹಾರದ ಹಣವನ್ನು ನೀಡದೇ ಮಲತಾಯಿ ಧೋರಣೆ ಮಾಡುತ್ತಿರುವುದು ಮತ್ತು ರಾಜ್ಯದಿಂದ ಗೆದ್ದಂತಹ 25 ಬಿಜೆಪಿ ಸಂಸದರು ರಾಜ್ಯದ ಪರವಾಗಿ ಧ್ವನಿ ಎತ್ತದೆ ಮೌನವಹಿಸಿರುವುದು ತೀವ್ರ ಖಂಡನೀಯ ಎಂದರು
ಕೂಡಲೇ ರಾಷ್ಟ್ರಪತಿಗಳು ಇಂತಹ ಜನವಿರೋಧಿ ಸರ್ಕಾರವನ್ನು ವಜಾಗೊಳಿಸಬೇಕೆಂದು ಪ್ರತಿಭನಾನಿರತರು ಆಗ್ರಹಿಸಿದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್, ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನಕುಮಾರ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅನಿತಾ ಕುಮಾರಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್. ರಮೇಶ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ. ಪ್ರವೀಣ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್, ಎಸ್. ರವಿ ಕುಮಾರ್, ಮಹಾನಗರ ಪಾಲಿಕೆ ಸದಸ್ಯರಾದ ಹೆಚ್.ಸಿ. ಯೋಗೀಶ್, ರೇಖಾ ರಂಗನಾಥ್ ಮೊದಲಾದವರಿದ್ದರು.








