ಯುದ್ಧದ ಸಂದರ್ಭದ ಅಪರಾಧ: ಕ್ಷಮೆ ಯಾಚಿಸಿದ ಕೊಲಂಬಿಯಾದ ಮಾಜಿ ಬಂಡುಗೋರ ಮುಖಂಡರು
ಬಗೋಟ, ಆ.5: ದೇಶದಲ್ಲಿ ದಶಕಗಳಷ್ಟು ದೀರ್ಘಾವಧಿಯಲ್ಲಿ ನಡೆದಿದ್ದ ಸಂಷರ್ಘದ ಸಂದರ್ಭ ನಡೆಸಿದ ಯುದ್ಧಾಪರಾಧಕ್ಕಾಗಿ ಕೊಲಂಬಿಯಾದ ಇಬ್ಬರು ಪ್ರಮುಖ ಮಾಜಿ ಬಂಡುಗೋರ ಮುಖಂಡರು ಸಂತ್ರಸ್ತರ ಕ್ಷಮೆ ಯಾಚಿಸಿರುವುದಾಗಿ ವರದಿಯಾಗಿದೆ.
ಕೊಲಂಬಿಯಾದ ಸುದೀರ್ಘಾವಧಿಯ ಅಂತರ್ಯುದ್ಧದ ಹಿಂದಿರುವ ಸಂಕೀರ್ಣ ಸತ್ಯವನ್ನು ಹೊರಗೆಳೆಯುವ ಉದ್ದೇಶದಿಂದ ನೇಮಿಸಲಾಗಿರುವ ಆಯೋಗದ ಎದುರು ಈ ಇಬ್ಬರು ಮುಖಂಡರು ಸಂಘರ್ಷದ ಸಂದರ್ಭ ನಡೆದ ಅಪಹರಣ, ಹಿಂಸಾಚಾರ, ಅತ್ಯಾಚಾರ, ಮಕ್ಕಳನ್ನು ಸಶಸ್ತ್ರ ಪಡೆಗಳಿಗೆ ನೇಮಿಸಿರುವುದು, ನಾಗರಿಕರ ಸಾಮೂಹಿಕ ಹತ್ಯಾಕಾಂಡ, ದೌರ್ಜನ್ಯದ ಬಗ್ಗೆ ಸಂತ್ರಸ್ತರ ಕ್ಷಮೆ ಯಾಚಿಸಿದರು.
ಕೊಲಂಬಿಯಾ ಸರಕಾರದೊಂದಿಗೆ ಯುದ್ಧಸಾರಿ 50 ವರ್ಷಕ್ಕೂ ಅಧಿಕ ವರ್ಷ ಯುದ್ಧ ನಡೆಸಿದ್ದ ರೆವೊಲ್ಯುಷನರಿ ಆರ್ಮ್‌ಡ್ ಫೋರ್ಸಸ್ ಆಫ್ ಕೊಲಂಬಿಯಾ(ಎಫ್‌ಎಆರ್‌ಸಿ) ಮುಖಂಡ ರಾಡ್ರಿಗೊ ಲೊಂಡೊನೊ ಮತ್ತು ಮತ್ತೊಂದು ಬಲಪಂಥೀಯ ಸಂಘಟನೆ ‘ಯುನೈಟೆಡ್ ಸೆಲ್ಫ್ ಡಿಫೆನ್ಸ್ ಫೋರ್ಸಸ್ ಆಫ್ ಕೊಲಂಬಿಯಾ(ಎಯುಸಿ)ಯ ಉನ್ನತ ಕಮಾಂಡರ್ ಸಾಲ್ವದೋರ್ ಮನ್ಕುಸೊ ಕ್ಷಮೆ ಯಾಚಿಸಿದರು. ಇವರಿಬ್ಬರೂ ಬಂಧನದಲ್ಲಿದ್ದಾರೆ. ಮನ್ಕುಸೊ ಅಮೆರಿಕದಲ್ಲಿ ಸೆರೆಯಲ್ಲಿದ್ದು ಈತನನ್ನು ಕೊಲಂಬಿಯಾಕ್ಕೆ ಗಡೀಪಾರು ಮಾಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.
ದೇಶದ ಇತಿಹಾಸದಲ್ಲಿ ಶಾಶ್ವತವಾಗಿ ದಾಖಲಾಗುವ ಐತಿಹಾಸಿಕ ಪ್ರಕ್ರಿಯೆಯ ಆರಂಭ ಇದಾಗಿದೆ. ಕೊಲಂಬಿಯಾದ ಇತಿಹಾಸದಲ್ಲಿ ಯಾವುದೇ ಉತ್ತಮ ವ್ಯಕ್ತಿ ಅಥವಾ ಕೆಟ್ಟ ವ್ಯಕ್ತಿ ಎಂಬುದಿಲ್ಲ ಎಂದು ಕೊಲಂಬಿಯಾದ ಅಪಾಯ ಪರಿಶೀಲನೆ ವಿಭಾಗದ ನಿರ್ದೇಶಕ ಸೆರಿಗೊ ಗಜ್‌ಮನ್ ಹೇಳಿದ್ದಾರೆ.