ಒಲಿಂಪಿಕ್ಸ್ ಮಹಿಳಾ ಹಾಕಿ: ಕಂಚು ವಂಚಿತ ಭಾರತ

File Photo
ಟೊಕಿಯೊ, ಆ.6: ರಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಬ್ರಿಟನ್ ವಿರುದ್ಧ ವೀರೋಚಿತ ಆಟವಾಡಿ 4-3 ಗೋಲುಗಳಿಂದ ಸೋಲೊಪ್ಪಿಕೊಳ್ಳುವ ಮೂಲಕ ಭಾರತ ತಂಡ ಒಲಿಂಪಿಕ್ಸ್ ಮಹಿಳಾ ಹಾಕಿ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಅವಕಾಶದಿಂದ ವಂಚಿತವಾಯಿತು.
ಪುರುಷರ ಹಾಕಿ ತಂಡ ಗುರುವಾರವಷ್ಟೇ ಕಂಚು ಗೆದ್ದ ಸಾಧನೆಯನ್ನು ಸರಿಗಟ್ಟುವ ಹುಮ್ಮಸ್ಸಿನಿಂದ ಮೈದಾನಕ್ಕಿಳಿದ ಭಾರತ ತಂಡ ಚೇತೋಹಾರಿ ಪ್ರದರ್ಶನ ನೀಡಿತು. 0-2 ಗೋಲುಗಳ ಹಿನ್ನಡೆಯಿಂದ ಚೇತರಿಸಿಕೊಂಡು ಪ್ರತಿಹೋರಾಟ ಸಂಘಟಿಸಿದ ಭಾರತದ ವನಿತೆಯರು ಕೊನೆಯ ಕ್ವಾರ್ಟರ್ನಲ್ಲಿ ಬ್ರಿಟನ್ಗೆ ಗೆಲುವು ಬಿಟ್ಟುಕೊಟ್ಟರು.
ಮೊದಲ ಕ್ವಾರ್ಟರ್ನಲ್ಲಿ ಉಭಯ ತಂಡಗಳು ಅದ್ಭುತ ರಕ್ಷಣಾತ್ಮಕ ಕೌಶಲ ಪ್ರದರ್ಶಿಸಿದವು. ಆರಂಭದಲ್ಲೇ ಬ್ರಿಟನ್ ಪಡೆದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಭಾರತ ಸುಲಭವಾಗಿ ವಿಫಲಗೊಳಿಸಿತು. ಆದರೆ ಎರಡನೇ ಕ್ವಾರ್ಟರ್ನ ಆರಂಭದಲ್ಲೇ ಬ್ರಿಟನ್ನ ಎಲೆನಾ ರಯೇರ್ ಮಾಡಿದ ಅದ್ಭುತ ಪಾಸನ್ನು ಗ್ರೇಸ್ ಎಕ್ಕಾ, ಭಾರತದ ಗೋಲುಪೆಟ್ಟಿಗೆ ಸೇರಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಬ್ರಿಟನ್ ಆರಂಭಿಕ ಮುನ್ನಡೆ ಪಡೆಯಿತು. ಅದ್ಭುತ ರಿವರ್ಸ್ ಶಾಟ್ ಮೂಲಕ ಸರಹ್ ರಾಬರ್ಟ್ಸನ್ ಗಳಿಸಿದ ಮತ್ತೊಂದು ಗೋಲು ಬ್ರಿಟನ್ನ ಮುನ್ನಡೆಯನ್ನು ಹಿಗ್ಗಿಸಿತು. ಆದರೆ ಎರಡು ಪೆನಾಲ್ಟಿ ಕಾರ್ನರ್ಗಳನ್ನು ಗೋಲಾಗಿ ಪರಿವರ್ತಿಸಿದ ಗುರ್ಜೀತ್ ಕೌರ್, ಭಾರತ ತಂಡ ಸಮಬಲ ಸಾಧಿಸಲು ನೆರವಾದರು. ವಂದನಾ ಕಟಾರಿಯಾ ಮತ್ತೊಂದು ಗೋಲು ಗಳಿಸಿ ಮುನ್ನಡೆಗೆ ಕಾರಣರಾದರು.
ಮೂರನೇ ಕ್ವಾರ್ಟರ್ನಲ್ಲಿ ಬ್ರಿಟನ್ ನಾಯಕಿ ಹೊಲಿ ಪೆರ್ನ್ ವೆಬ್ ಗೋಲು ಗಳಿಸಿ ತಮ್ಮ ತಂಡ ಸಮಬಲ ಸಾಧಿಸಲು ನೆರವಾದರು. ಗ್ರೇಸ್ ಬಾಲ್ಸ್ಡನ್ ಅಂತಿಮವಾಗಿ ಪೆನಾಲ್ಟಿ ಕಾರ್ನರ್ನಲ್ಲಿ ಗೋಲು ಸಾಧಿಸುವ ಮೂಲಕ ಗೆಲುವನ್ನು ತಮ್ಮ ತಂಡಕ್ಕೆ ಸೆಳೆದರು. ಈ ಮೂಲಕ ಬ್ರಿಟನ್ ಸತತ ಮೂರು ಒಲಿಂಪಿಕ್ಸ್ನಲ್ಲಿ ಪದಕದ ಸಾಧನೆ ಮಾಡಿತು. 2012ರಲ್ಲಿ ಕೂಡಾ ಬ್ರಿಟನ್ ಕಂಚಿನ ಪದಕ ಗೆದ್ದಿತ್ತು.