ಮಧ್ಯಪ್ರದೇಶ: ಮಳೆ ಅವಾಂತರಕ್ಕೆ 12 ಮಂದಿ ಬಲಿ

Photo credit: PTI
ಭೋಪಾಲ್, ಆ.6: ರಾಜ್ಯದ ಪ್ರವಾಹಪೀಡಿತ ಗ್ವಾಲಿಯರ್ ಮತ್ತು ಚಂಬಲ್ ಪ್ರದೇಶಗಳಲ್ಲಿ ಸಂಭವಿಸಿದ ವಿವಿಧ ಮಳೆ ಸಂಬಂಧಿತ ದುರಂತಗಳಲ್ಲಿ 12 ಮಂದಿ ಮೃತಪಟ್ಟು, ಏಳು ಮಂದಿ ಗಾಯಗೊಂಡಿದ್ದಾರೆ. ರಾಜ್ಯದ 23 ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಧ್ಯಪ್ರದೇಶದ ಉತ್ತರ ಭಾಗದ ಗ್ವಾಲಿಯರ್ ಮತ್ತು ಚಂಬಲ್ ಪ್ರದೇಶಗಳಲ್ಲಿ ಮಳೆ ಕಡಿಮೆಯಾಗಿದ್ದು, ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ. ಕಳೆದ ರವಿವಾರದಿಂದ ಈ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆರು ಸೇತುವೆಗಳು ಕೊಚ್ಚಿ ಹೋಗಿದ್ದು, 55 ಸಾವಿರಕ್ಕೂ ಹೆಚ್ಚು ಮಂದಿ ಬಾಧಿತರಾಗಿದ್ದಾರೆ. 70 ವರ್ಷಗಳಲ್ಲೇ ಇಂಥ ಭೀಕರ ಪ್ರವಾಹ ಪರಿಸ್ಥಿತಿಯನ್ನು ಕಂಡಿಲ್ಲ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪ್ರತಿಕ್ರಿಯಿಸಿದ್ದಾರೆ.
"ನಿನ್ನೆವರೆಗೆ ಹನ್ನೆರಡು ಮಳೆ ಸಂಬಂಧಿ ಸಾವುಗಳು ವರದಿಯಾಗಿವೆ. ಇಂದು ಯಾವುದೇ ಸಾವು ಸಂಭವಿಸಿದ ವರದಿಯಾಗಿಲ್ಲ" ಎಂದು ಪ್ರಾದೇಶಿಕ ಆಯುಕ್ತ ಆಶೀಶ್ ಸಕ್ಸೇನಾ ವಿವರಿಸಿದರು. ಕೆಲ ಘಟನೆಗಳಲ್ಲಿ ಮನೆಕುಸಿತದಿಂದ ಸಾವು ಸಂಭವಿಸಿದೆ ಮತ್ತೆ ಕೆಲವು ಕಡೆ ಜನರ ನಿರ್ಲಕ್ಷ್ಯ ಸಾವಿಗೆ ಕಾರಣವಾಗಿದೆ. ನದಿ ಪ್ರವಾಹವನ್ನು ವೀಕ್ಷಿಸುತ್ತಿದ್ದ ವ್ಯಕ್ತಿಯೊಬ್ಬ ನೀರುಪಾಲಾಗಿದ್ದು, ಸೇತುವೆಯ ಮೇಲೆ ನೀರು ಹರಿಯುತ್ತಿದ್ದ ಸಂದರ್ಭದಲ್ಲಿ ದಾಟುವ ಸಾಹಸ ಮಾಡಿದ ಕೆಲವರು ಮೃತಪಟ್ಟಿದ್ದಾರೆ ಎಂದು ವಿವರಿಸಿದ್ದಾರೆ.
ತೀವ್ರವಾಗಿ ಬಾಧಿತವಾಗಿರುವ ಶಿವಪುರ ಮತ್ತು ದಾತಿಯಾ ಜಿಲ್ಲೆಗಳಲ್ಲಿ ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿದ್ದ ಮೂರು ಮಂದಿಯನ್ನು ಗುರುವಾರ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದ್ದು, ಆಹಾರ ಪೊಟ್ಟಣಗಳನ್ನು ಮತ್ತು ಇತರ ತುರ್ತು ಅಗತ್ಯತೆಯ ವಸ್ತುಗಳನ್ನು ವಿಮಾನಗಳ ಮೂಲಕ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.







