ರಾಜಕೀಯ ವಿರೋಧಿಗಳು ನೀಡಿದ್ದ ದೂರು ಪರಿಗಣಿಸಿ ಈ.ಡಿ. ದಾಳಿ: ಶಾಸಕ ಝಮೀರ್ ಅಹ್ಮದ್

ಬೆಂಗಳೂರು, ಆ. 6: `ನನ್ನ ನಿವಾಸ, ಕಚೇರಿ ಹಾಗೂ ನನ್ನ ಆಪ್ತರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯದ (ಈಡಿ) ಅಧಿಕಾರಿಗಳ ದಾಳಿಯಿಂದ ನನಗೆ ನೆಮ್ಮದಿಯಾಗಿದೆ. ನನ್ನ ರಾಜಕೀಯ ವಿರೋಧಿಗಳು ನೀಡಿದ್ದ ದೂರನ್ನು ಪರಿಗಣಿಸಿ ಈಡಿ ದಾಳಿ ಮಾಡಲಾಗಿದೆ' ಎಂದು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಝಡ್. ಝಮೀರ್ ಅಹ್ಮದ್ ಖಾನ್ ದೂರಿದ್ದಾರೆ.
ಶುಕ್ರವಾರ ಈಡಿ ದಾಳಿ, ದಾಖಲೆಗಳ ಪರಿಶೀಲನೆ ಬಳಿಕ ಪ್ರತಿಕ್ರಿಯೆ ನೀಡಿದ ಝಮೀರ್ ಅಹ್ಮದ್ ಖಾನ್, `ನಾನು ಯಾವುದೇ ಕಾನೂನು ಬಾಹಿರ ಕೆಲಸ ಮಾಡಿಲ್ಲ. ಕಷ್ಟಪಟ್ಟು ದುಡಿದ ಹಣದಲ್ಲಿ ನಾನು ಮನೆ ನಿರ್ಮಿಸಿದ್ದೇನೆ. ಈಡಿ ಅಧಿಕಾರಿಗಳು ಕೇಳಿದ ಎಲ್ಲ ಮಾಹಿತಿಯನ್ನು ನೀಡಿದ್ದೇನೆ. ಆದರೆ, ಐ ಮಾನಿಟರಿ ಅಡ್ವೈಸರಿ(ಐಎಂಎ)ಗೆ ಸಂಬಂಧಿಸಿದ ಯಾವ ಮಾಹಿತಿಯನ್ನು ಅಧಿಕಾರಿಗಳು ಕೇಳಿಲ್ಲ' ಎಂದು ಸ್ಪಷ್ಟಪಡಿಸಿದರು.
`ಅಗತ್ಯ ಬಿದ್ದರೆ ವಿಚಾರಣೆಗೆ ಬರಬೇಕು ಎಂದು ಈಡಿ ಅಧಿಕಾರಿಗಳು ಸೂಚಿಸಿದ್ದು, ನಾನು ಅವರಿಗೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ. ಇದುವರೆಗೂ ಈಡಿ ಅಧಿಕಾರಿಗಳು ನನಗೆ ಯಾವುದೇ ನೋಟಿಸ್ ಅನ್ನು ನೀಡಿಲ್ಲ. ನನ್ನ ಮನೆ ನಿರ್ಮಾಣ ಸಂಪೂರ್ಣ ಪಾರದರ್ಶಕವಾಗಿದೆ. ಈ ಸಂಬಂಧ ಬ್ಯಾಂಕಿನಿಂದ ಹಣಕಾಸು ವಹಿವಾಟು ನಡೆಸಿದ ಮಾಹಿತಿಯನ್ನು ಅಧಿಕಾರಿಗಳು ಪಡೆದುಕೊಂಡಿದ್ದಾರೆ' ಎಂದು ಝಮೀರ್ ಅಹ್ಮದ್ ಖಾನ್ ಇದೇ ವೇಳೆ ತಿಳಿಸಿದರು.
`ನಮ್ಮ ಮನೆಯನ್ನು ಸಂಪೂರ್ಣವಾಗಿ ಈಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಅವರಿಗೆ ಮನೆಯಲ್ಲಿ ಯಾವುದೇ ಹಣ ಅಥವಾ ಒಡವೆ ಏನೂ ಸಿಕ್ಕಿಲ್ಲ. ನಾನು ಸಂಪೂರ್ಣ ಪಾರದರ್ಶಕವಾಗಿದ್ದೇನೆ. ಈ ದೂರಿನ ಹಿಂದೆ ರಾಜಕೀಯ ಷಡ್ಯಂತ್ರ ಇರಬಹುದು. ನನ್ನ ಮೇಲೆ ದೂರು ಕೊಟ್ಟವರು ಯಾರು ಎಂದು ಅಧಿಕಾರಿಗಳಿಗೆ ಪ್ರಶ್ನೆ ಕೇಳಿದೆ, ಆದರೆ ಅವರು ಹೆಸರು ಹೇಳಿಲ್ಲ' ಎಂದು ಝಮೀರ್ ತಿಳಿಸಿದರು.
`ನನ್ನ ವಿರುದ್ಧ ದೂರು ನೀಡಿದವರಿಗೆ ನಾನೇನು ಉತ್ತರ ಕೊಡುವುದಿಲ್ಲ, ದೇವರೇ ಉತ್ತರ ಕೊಡ್ತಾನೆ. ನಾನು ಕಳ್ಳತನ, ಲೂಟಿ ಮಾಡಿದ್ರೆ ತಪ್ಪು. ಸ್ವಂತ ದುಡಿಮೆಯಿಂದ ಸಂಪಾದಿಸಿದ ದುಡ್ಡು. ನಾನೇ ಅವರನ್ನು ಬ್ಯಾಂಕ್‍ಗೆ ಕಳುಹಿಸಿದ್ದೆ, ಎಸ್‍ಬಿಐ, ಜನತಾ ಸೇರಿ ಮೂರು ಬ್ಯಾಂಕ್ ಕಳುಹಿಸಿದ್ದೆ, ಅಲ್ಲೆಲ್ಲಾ ಪರಿಶೀಲಿಸಿದ್ದಾರೆ. ನಾನು ಶ್ರಮವಹಿಸಿ ಏಳು ವರ್ಷದಿಂದ ಮನೆ ನಿರ್ಮಾಣ ಮಾಡಿದ್ದೇನೆ. ಎಲ್ಲರಿಗೂ ಮನೆ ಮೇಲೆ ಹಾಗೂ ನನ್ನ ಮೇಲೆ ಕಣ್ಣು. ರಾಜಕೀಯದಲ್ಲಿ ಶತ್ರುಗಳು ಸಹಜ. ದೂರು ನೀಡಿದ್ದು ಒಳ್ಳೆಯದೇ ಆಯಿತು. ಇವತ್ತಲ್ಲ ನಾಳೆ ಇದು ಆಗಲೇಬೇಕಾಗಿತ್ತು. ಅದು ಈಗ ಕ್ಲಿಯರ್ ಆಗಿದೆ' ಎಂದು ಝಮೀರ್ ಅಹ್ಮದ್ ಖಾನ್ ಮಾಹಿತಿ ನೀಡಿದರು.
ನಿನ್ನೆ ಬೆಳಗ್ಗೆ 6ಗಂಟೆಯಿಂದಲೇ ಝಮೀರ್ ಅಹ್ಮದ್ ಖಾನ್ ಅವರ ಬಂಬೂ ಬಝಾರ್ ಬಳಿಯ ನಿವಾಸ, ಕಲಾಸಿಪಾಳ್ಯದಲ್ಲಿನ ಟ್ರಾವೆಲರ್ಸ್ ಕಚೇರಿ ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ದಾಳಿ ನಡೆಸಿದ ಈಡಿ ಅಧಿಕಾರಿಗಳು ಸತತ 20 ಗಂಟೆಗಳಿಗೂ ಹೆಚ್ಚು ಸಮಯ ದಾಖಲೆಗಳ ಪರಿಶೀಲನೆ ನಡೆಸಿದ್ದರು. ಐಎಂಎ ಬಹುಕೋಟಿ ರೂ.ಹಗರಣಕ್ಕೆ ಸಂಬಂಧಿಸಿದ ದಾಳಿ ಎಂದು ಹೇಳಲಾಗಿತ್ತು. ಆದರೆ, ಇದು ಐಎಂಎ ಸಂಬಂಧಿಸಿದ ದಾಳಿಯಲ್ಲ ಎಂಬುದು ಶಾಸಕ ಝಮೀರ್ ಅಹ್ಮದ್ ಹೇಳಿಕೆಯಿಂದ ಸ್ಪಷ್ಟವಾದಂತೆ ಆಗಿದೆ.







