ದ.ಕ. ಸಹಿತ ಎಂಟು ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ: ಸಿಎಂ ಬೊಮ್ಮಾಯಿ
ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ

ಬೆಂಗಳೂರು, ಆ. 6: `ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಕರ್ನಾಟಕ ರಾಜ್ಯದ ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರ, ಕೊಡಗು, ಬೆಳಗಾವಿ, ವಿಜಯಪುರ, ಬೀದರ್, ಕಲಬುರಗಿ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ರಾತ್ರಿಯಿಂದಲೇ `ವೀಕೆಂಡ್ ಕರ್ಫ್ಯೂ 'ವನ್ನು ಜಾರಿಗೊಳಿಸಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಪ್ರಕಟಿಸಿದ್ದಾರೆ.
ಶುಕ್ರವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ ನಿಯಂತ್ರಣ ಸಂಬಂಧದ ಟಾಸ್ಕ್‍ಫೋರ್ಸ್ ಸಭೆಯ ಬಳಿಕ ಮಾತನಾಡಿದ ಅವರು, `ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳ ಗಡಿ ಜಿಲ್ಲೆಗಳಲ್ಲಿ ವಾರಾಂತ್ಯದ ಕಫ್ರ್ಯೂ ಜಾರಿ ಮಾಡಲು ತೀರ್ಮಾನಿಸಲಾಗಿದೆ. ಅಲ್ಲದೆ, ರಾಜ್ಯಾದ್ಯಂತ ನೈಟ್ ಕರ್ಫ್ಯೂ ವನ್ನು ರಾತ್ರಿ 10ಗಂಟೆಯ ಬದಲು ರಾತ್ರಿ 9ಗಂಟೆಯಿಂದ ಬೆಳಗ್ಗೆ 5ಗಂಟೆಯವರೆಗೆ ಜಾರಿಗೊಳಿಸಲು ನಿರ್ಧರಿಸಲಾಗಿದೆ' ಎಂದು ತಿಳಿಸಿದರು.
`ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಿದೆ. ಆ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲು ಈಗಾಗಲೇ ಅಧಿಕಾರಿಗಳು ಸೂಚನೆ ನೀಡಲಾಗಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಕೋವಿಡ್ ಮೂರನೇ ಅಲೆ ಸೇರಿದಂತೆ ಕೋವಿಡ್ ಪಾಸಿಟಿವಿಸಿ ದರವನ್ನು ಆಧರಿಸಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲು ಚರ್ಚಿಸಿ ತೀರ್ಮಾನ ಮಾಡಲಾಗುವುದು' ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
`ದಕ್ಷಿಣ ಕನ್ನಡ, ಮೈಸೂರು, ಕೊಡಗು ಚಾಮರಾಜನಗರ, ಬೆಳಗಾವಿ, ವಿಜಯಪುರ ಬೀದರ್, ಕಲಬುರಗಿ ಸೇರಿದಂತೆ ಗಡಿ ಜಿಲ್ಲೆಗಳಲ್ಲಿ ವಾರಂತ್ಯದ ಕಫ್ಯೂ ಹಾಗೂ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ರಾಜ್ಯ ಪೆÇಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಜಿಲ್ಲೆಗಳಲ್ಲಿ ಸೂಕ್ತ ಕಟ್ಟೆಚ್ಚರ ವಹಿಸಲು ಸ್ಥಳೀಯ ಪೊಲೀಸರಿಗೆ ನಿರ್ದೇಶನ ನೀಡಲಾಗುವುದು' ಎಂದು ಬಸವರಾಜ ಬೊಮ್ಮಾಯಿ ಇದೇ ವೇಳೆ ಸ್ಪಷ್ಟಪಡಿಸಿದರು.
`ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕೆ ಸಾರ್ವಜನಿಕರು ಸೂಕ್ತ ಮುನ್ನಚ್ಚರಿಕೆ ವಹಿಸಬೇಕು. ಎಲ್ಲರೂ ತಪ್ಪದೆ ಮಾಸ್ಕ್ ಧರಿಸಿ, ವ್ಯಕ್ತಿಗತ ಸ್ವಚ್ಛತೆ ಮತ್ತು ಪರಸ್ಪರ ಅಂತರ ಕಾಪಾಡಿಕೊಳ್ಳುವುದರ ಜೊತೆಗೆ ಸರಕಾರದ ಕೋವಿಡ್ ಮಾರ್ಗಸೂಚಿಯನ್ನು ಎಲ್ಲರೂ ತಪ್ಪದೆ ಪಾಲಿಸುವ ಮೂಲಕ ಕೋವಿಡ್ ಸೋಂಕು ನಿಯಂತ್ರಣಕ್ಕೆ ಸರಕಾರದೊಂದಿಗೆ ಸಹಕರಿಸಬೇಕು' ಎಂದು ಬಸವರಾಜ ಬೊಮ್ಮಾಯಿ ಇದೇ ವೇಳೆ ಮನವಿ ಮಾಡಿದರು.
ಸಭೆಯಲ್ಲಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಡಾ.ಕೆ.ಸುಧಾಕರ್, ತಜ್ಞರಾದ ಡಾ.ಸಿ.ಎನ್.ಮಂಜುನಾಥ್, ಡಾ.ದೇವಿಪ್ರಸಾದ್ ಶೆಟ್ಟಿ, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಸುದರ್ಶನ್, ರಾಜ್ಯ ಸರಕಾರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.







