ಉಡುಪಿ: ಕೋವಿಡ್ ಗೆ ಮಹಿಳೆಯರಿಬ್ಬರು ಬಲಿ; 153 ಮಂದಿಗೆ ಕೊರೋನ ಪಾಸಿಟಿವ್

ಉಡುಪಿ, ಆ.6: ಶುಕ್ರವಾರ ಒಟ್ಟು 153 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. 83 ಮಂದಿ ಸೋಂಕಿನಿಂದ ಗುಣಮುಖರಾಗಿದ್ದರೆ, ಜಿಲ್ಲೆಯಲ್ಲಿ ಈಗಲೂ 1,400 ಮಂದಿ ಸೋಂಕಿಗೆ ಸಕ್ರಿಯರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯ ಇಂದಿನ ಬುಲೆಟಿನ್‌ನಲ್ಲಿ ಕುಂದಾಪುರದ 45 ಮತ್ತು 42ರ ಹರೆಯದ ಮಹಿಳೆಯರು ಸೋಂಕಿಗೆ ಬಲಿಯಾಗಿರುವುದನ್ನು ತೋರಿಸಲಾಗಿದೆ. ಆದರೆ ಇವರಿಬ್ಬರೂ ಕಳೆದ ಮೇ ತಿಂಗಳಲ್ಲೇ ಮೃತಪಟ್ಟಿದ್ದಾರೆ ಎಂದು ರಾಜ್ಯ ಬುಲೆಟಿನ್ ದಾಖಲಿಸಿದೆ. ಇಬ್ಬರೂ ಕೋವಿಡ್ ಸೋಂಕಿನೊಂದಿಗೆ ಉಸಿರಾಟ ತೊಂದರೆ ಹಾಗೂ ನ್ಯುಮೋನಿಯಾದಿಂದ ನರಳುತಿದ್ದು ಕ್ರಮವಾಗಿ ಮೇ 18 ಹಾಗೂ ಮೇ 22ರಂದು ಮೃತಪಟ್ಟಿದ್ದರು. ಈ ಮೂಲಕ ಜಿಲ್ಲೆಯಲ್ಲಿ ಕೊರೋನಕ್ಕೆ ಬಲಿಯಾದವರ ಸಂಖ್ಯೆ 424ಕ್ಕೇರಿದೆ.
ಇಂದು ಕೊರೋನ ಸೋಂಕು ದೃಢಪಟ್ಟ 153 ಮಂದಿಯಲ್ಲಿ 69 ಮಂದಿ ಪುರುಷರು ಹಾಗೂ 84 ಮಂದಿ ಮಹಿಳೆಯರು. ಇವರಲ್ಲಿ 83 ಮಂದಿ ಉಡುಪಿ ತಾಲೂಕು, 31 ಮಂದಿ ಕುಂದಾಪುರ ಹಾಗೂ 39 ಮಂದಿ ಕಾರ್ಕಳ ತಾಲೂಕಿ ನವರು. ಇಂದು ಪಾಸಿಟಿವ್ ಬಂದವರಲ್ಲಿ 22 ಮಂದಿ ಕೋವಿಡ್ ಆಸ್ಪತ್ರೆ ಹಾಗೂ 131 ಮಂದಿ ಮನೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಗುರುವಾರ 83 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 68,780ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 4657 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 70,604ಕ್ಕೇರಿದೆ ಎಂದು ಡಾ.ಉಡುಪ ತಿಳಿಸಿದರು. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 8,06,608 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.
ಒಬ್ಬನಲ್ಲಿ ಸೋಂಕು: ಹೊರಜಿಲ್ಲೆಯ ಒಬ್ಬ ರೋಗಿಯಲ್ಲಿ ಇಂದು ಹೊಸದಾಗಿ ಬ್ಲ್ಯಾಕ್ ಫಂಗಸ್ ಸೋಂಕು ಪತ್ತೆಯಾಗಿದೆ. ಅಲ್ಲದೇ ಒಬ್ಬ ಚಿಕಿತ್ಸೆಯ ಬಳಿಕ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸದ್ಯ ಹೊರಜಿಲ್ಲೆಗಳ ಎಂಟು ಮಂದಿ ಮಣಿಪಾಲ ಕೆಎಂಸಿ ಹಾಗೂ ಉಡುಪಿ ಆದರ್ಶ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
9532 ಮಂದಿಗೆ ಲಸಿಕೆ: ಉಡುಪಿ ಜಿಲ್ಲೆಯಲ್ಲಿ ಇಂದು 9532 ಮಂದಿಗೆ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಇವುಗಳಲ್ಲಿ 3050 ಮಂದಿಗೆ ಮೊದಲ ಡೋಸ್ ಹಾಗೂ 6482 ಮಂದಿಗೆ ಎರಡನೇ ಡೋಸ್‌ನ್ನು ನೀಡಲಾಗಿದೆ ಎಂದು ಡಿಎಚ್‌ಓ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.
18ರಿಂದ 44ವರ್ಷದೊಳಗಿನ 2409 ಮಂದಿಗೆ ಮೊದಲ ಡೋಸ್ ಹಾಗೂ 4967 ಮಂದಿಗೆ ಎರಡನೇ ಡೋಸ್ ನೀಡಲಾಗಿದೆ. 45 ವರ್ಷ ಮೇಲ್ಪಟ್ಟ ವರಲ್ಲಿ 641 ಮಂದಿಗೆ ಮೊದಲ ಡೋಸ್ ಹಾಗೂ 1511 ಮಂದಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ. ಇಬ್ಬರು ಆರೋಗ್ಯ ಕಾರ್ಯಕರ್ತರು ಹಾಗೂ ಇಬ್ಬರು ಮುಂಚೂಣಿ ಕಾರ್ಯಕರ್ತರು ಸಹ ಲಸಿಕೆ ಪಡೆದವರಲ್ಲಿ ಸೇರಿದ್ದಾರೆ ಎಂದು ಡಾ.ಉಡುಪ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 5,36,344 ಮಂದಿಗೆ ಮೊದಲ ಡೋಸ್ ಹಾಗೂ 1,92,863 ಮಂದಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ.







