ನ್ಯಾಯಾಧೀಶರ ಭದ್ರತೆ ಬಗ್ಗೆ ವರದಿ ಸಲ್ಲಿಸಲು ರಾಜ್ಯ ಸರಕಾರಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

ಹೊಸದಿಲ್ಲಿ, ಆ. 6: ನ್ಯಾಯಾಧೀಶರಿಗೆ ಬೆದರಿಕೆ ಒಡ್ಡುವ ಘಟನೆಗಳು ‘ಗಂಭೀರ’ ಎಂದು ಪರಿಗಣಿಸಿರುವ ಸುಪ್ರೀಂ ಕೋರ್ಟ್, ನ್ಯಾಯಾಧೀಶರಿಗೆ ನೀಡಲಾದ ಭದ್ರತೆಯ ಕುರಿತು ಸ್ಥಿತಿಗತಿ ವರದಿ ಸಲ್ಲಿಸುವಂತೆ ಶುಕ್ರವಾರ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹಾಗೂ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಒಳಗೊಂಡ ನ್ಯಾಯಪೀಠ, ಧನ್ಬಾದ್ ನಲ್ಲಿ ನ್ಯಾಯಾಧೀಶರಿಗೆ ವಾಹನ ಢಿಕ್ಕಿ ಹೊಡೆಸಿ ಹತ್ಯೆಗೈದಿರುವುದೆಂದು ಹೇಳಲಾದ ಪ್ರಕರಣದ ವಿಚಾರಣೆಯ ವೇಳೆ ದೇಶದ ನ್ಯಾಯಾಧೀಶರ ರಕ್ಷಣೆ ಕುರಿತು ಪ್ರಸ್ತಾಪಿಸಿದೆ.
ಧನ್ ಭಾದ್ ನಲ್ಲಿ ಜುಲೈ 28ರಂದು ನಡೆದ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ ಎಂದು ಜಾರ್ಖಂಡ್ ಸರಕಾರದ ಪರವಾಗಿ ಹಾಜರಾಗಿದ್ದ ನ್ಯಾಯವಾದಿ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದರು. ನ್ಯಾಯಾಧೀಶರಿಗೆ ಬೆದರಿಕೆ ಒಡ್ಡುವ ಹಾಗೂ ನಿಂದನಾತ್ಮಕ ಸಂದೇಶ ಕಳುಹಿಸುವ ಹಲವು ಪ್ರಕರಣಗಳ ಹಿಂದೆ ಪಾತಕಿಗಳು ಹಾಗೂ ಉನ್ನತ ವ್ಯಕ್ತಿಗಳು ಶಾಮೀಲಾಗಿದ್ದಾರೆ ಎಂದು ನ್ಯಾಯಪೀಠ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರಿಗೆ ತಿಳಿಸಿತು.
ಗಣ್ಯ ವ್ಯಕ್ತಿಗಳಿಗೆ ಅನುಕೂಲಕರವಾದ ಆದೇಶ ಬರದೇ ಇದ್ದಾಗ ನ್ಯಾಯಾಂಗಕ್ಕೆ ಕೆಡುಕುಂಟು ಮಾಡುವುದು ಹೊಸ ಟ್ರೆಂಡ್. ನ್ಯಾಯಾಂಗಕ್ಕೆ ಐಬಿ (ಇಂಟಲಿಜೆಂಟ್ಸ್ ಬ್ಯುರೊ) ಹಾಗೂ ಸಿಬಿಐ ಯಾವುದೇ ರೀತಿಯ ನೆರವು ನೀಡುವುದಿಲ್ಲ. ನ್ಯಾಯಾಧೀಶರು ದೂರು ಸಲ್ಲಿಸಿದರೆ ಅವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನ್ಯಾಯಪೀಠ ಹೇಳಿತು. ಧನ್ಬಾದ್ ನ್ಯಾಯಾಧೀಶರ ಹತ್ಯೆ ಪ್ರಕರಣದ ವಿಚಾರಣೆಯನ್ನು ಸೋಮವಾರ (ಆ.9) ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ ನ್ಯಾಯಪೀಠ, ನಾವು ಈ ಸಂಬಂಧ ಸಿಬಿಐಗೆ ನೋಟಿಸು ನೀಡುತ್ತಿದ್ದೇವೆ ಎಂದು ಹೇಳಿತು.







