ಕೊಗ್ರೆ-ಕೊಪ್ಪ ಸಂಪರ್ಕ ರಸ್ತೆಯ ಸೇತುವೆಗೆ ಹಾನಿ: ಅಪಾಯ ಸಂಭವಿಸುವ ಮುನ್ನ ದುರಸ್ತಿಗೆ ಗ್ರಾಮಸ್ಥರ ಆಗ್ರಹ

ಚಿಕ್ಕಮಗಳೂರು, ಆ.6: ಜಿಲ್ಲೆಯ ಕೊಪ್ಪ ತಾಲೂಕಿನ ಕೊಗ್ರೆ ಗ್ರಾಮದಲ್ಲಿರುವ ಸೇತುವೆಯೊಂದು ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಶಿಥಿಲಗೊಂಡಿದ್ದು, ಸಂಬಂಧಿಸಿದ ಇಲಾಖಾಧಿಕಾರಿಗಳು ಶೀಘ್ರ ದುರಸ್ತಿಗೆ ಕ್ರಮವಹಿಸದಿದ್ದಲ್ಲಿ ಭಾರೀ ಅನಾಹುತ ಸಂಭವಿಸಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಕೊಪ್ಪ ತಾಲೂಕಿನ ಕೊಗ್ರೆ ಗ್ರಾಮದಲ್ಲಿರುವ ಈ ಸೇತುವೆ ಭಾರೀ ಹಳೆಯ ಸೇತುವೆಯಾಗಿದ್ದು, ಸೇತುವೆಯನ್ನು ಕೆಡವಿ ಹೊಸ ಸೇತುವೆ ನಿರ್ಮಿಸಬೇಕೆಂದು ಗ್ರಾಮಸ್ಥರು ಅನೇಕ ಬಾರಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ ಇಲಾಖಾಧಿಕಾರಿಗಳು ಈ ಸಂಬಂಧ ನಿರ್ಲಕ್ಷ್ಯ ವಹಿಸಿದ್ದರು. ಆದರೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಸೇತುವೆ ನಿರ್ಮಿಸಲಾಗಿರುವ ಹಳ್ಳದಲ್ಲಿ ಭಾರೀ ನೀರು ಹರಿದು ಸೇತುವೆ ಎರಡೂ ಬದಿಯಲ್ಲಿ ನಿರ್ಮಿಸಿರುವ ಕಲ್ಲಿನ ಪಿಲ್ಲರ್‍ಗಳು ಅಡಿಯಲ್ಲಿ ಮಣ್ಣು ಕುಸಿದ ಪರಿಣಾಮ ಪಿಲ್ಲರ್‍ಗಳ ಕಲ್ಲುಗಳು ಕುಸಿಯಲಾರಂಭಿಸಿವೆ.
ಈ ಸೇತುವೆ ಇರುವ ರಸ್ತೆ ರಾಜ್ಯ ಹೆದ್ದಾರಿಯಾಗಿದ್ದು, ಕಳಸ-ಕೊಗ್ರೆ-ಜಯಪುರ-ಕೊಪ್ಪ-ಶೃಂಗೇರಿ-ಶಿವಮೊಗ್ಗ-ಚಿಕ್ಕಮಗಳೂರು ಸಂಪರ್ಕದ ಪ್ರಮುಖ ಕೊಂಡಿಯಾಗಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಸೇತುವೆ ಮೇಲೆ ಸಂಚಾರ ಮಾಡುತ್ತಿವೆ. ಈ ಭಾಗದ ಗ್ರಾಮೀಣ ಜನರ ಸಂಪರ್ಕಕ್ಕೆ ಈ ಸೇತುವೆ ಪ್ರಮುಖ ಸಂಪರ್ಕ ಸಾಧನವಾಗಿದೆ. ಸದ್ಯ ಭಾರೀ ಮಳೆಯಿಂದ ಸೇತುವೆ ಶಿಥಿಲಗೊಂಡಿದೆ.
ಈ ಸೇತುವೆ ಮೇಲೆ ಪ್ರತಿನಿತ್ಯ ಬಸ್, ಲಾರಿ ಸೇರಿದಂತೆ ಪ್ರವಾಸಿಗರ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ಮಾಡುತ್ತಿರುವುದರಿಂದ ಸೇತುವೆ ಮತ್ತಷ್ಟು ಶಿಥಿಲವಾಗುವ ಸಾಧ್ಯತೆ ಇದೆ. ಸೇತುವೆ ಶಿಥಿಲಾವಸ್ಥೆಯಲ್ಲಿರುವುದರಿಂದ ವಾಹನಗಳು ಸಂಚರಿಸುವ ವೇಳೆ ಸೇತುವೆ ಕುಸಿದಲ್ಲಿ ಭಾರೀ ಅನಾಹುತ ಸಂಭವಿಸಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯ ಮಲೆನಾಡು ಭಾಗದಲ್ಲಿ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಭಾರೀ ಮಳೆಯಿಂದ ಹಳ್ಳ ತುಂಬಿ ಹರಿದಲ್ಲಿ ಸೇತುವೆಯ ಸ್ಥಂಭಗಳಿಗೆ ಮತ್ತಷ್ಟು ಹಾನಿಯಾಗಲಿದೆ. ಆದ್ದರಿಂದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸೇತುವೆಯ ಸ್ಥಿತಿಗತಿಯನ್ನು ಪರಿಶೀಲಿಸಿ ಶೀಘ್ರ ದುರಸ್ತಿಗೆ ಮುಂದಾಗಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.







