12 ರಾಜ್ಯಗಳಲ್ಲಿ ಆಮ್ಲಜನಕದ ಕೊರತೆಯಿಂದ ಸಾವುಗಳು ಸಂಭವಿಸಿಲ್ಲ:ಆರೋಗ್ಯ ಸಚಿವಾಲಯದ ಮೂಲಗಳು

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಆ.6: ಎರಡನೇ ಕೋವಿಡ್ ಅಲೆಯ ಸಂದರ್ಭದಲ್ಲಿ ವೈದ್ಯಕೀಯ ಆಮ್ಲಜಕನದ ಕೊರತೆಯಿಂದ ಯಾವುದೇ ಸಾವುಗಳು ಸಂಭವಿಸಿಲ್ಲ ಎಂದು 12 ರಾಜ್ಯಗಳಿಂದ ಲಭ್ಯವಾಗಿರುವ ಅಂಕಿಅಂಶಗಳು ಸೂಚಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.
ಈ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸುವಂತೆ ಮತ್ತು ತನಗೆ ಸಲ್ಲಿಸುವಂತೆ ಕಳೆದ ವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದ್ದ ಕೇಂದ್ರವು, ತಾನು ಅವುಗಳನ್ನು ಕ್ರೋಡೀಕರಿಸಿ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸುವುದಾಗಿ ತಿಳಿಸಿತ್ತು. ಪದೇ ಪದೇ ಉಭಯ ಸದನಗಳ ಮುಂದೂಡುವಿಕೆಗೆ ಕಾರಣವಾಗಿರುವ ಪ್ರತಿಪಕ್ಷಗಳ ಪ್ರತಿಭಟನೆಗಳ ವಿಷಯಗಳಲ್ಲಿ ಆಮ್ಲಜನಕದ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಸರಕಾರವು ಕಳೆದ ತಿಂಗಳು ನೀಡಿದ್ದ ಹೇಳಿಕೆಯೂ ಸೇರಿದೆ.
ಈವರೆಗೆ 13 ರಾಜ್ಯಗಳು ಮಾಹಿತಿಗಳನ್ನು ಸಲ್ಲಿಸಿದ್ದು,ಪಂಜಾಬ ಮಾತ್ರ ಸಾವುಗಳ ಪೈಕಿ ನಾಲ್ಕನ್ನು ‘ಶಂಕಾಸ್ಪದ ’ಎಂದು ಗುರುತಿಸಿದೆ ಎಂದು ಈ ಮೂಲಗಳು ಹೇಳಿವೆ.
ಒಡಿಶಾ,ಅರುಣಾಚಲ ಪ್ರದೇಶ, ಉತ್ತರಾಖಂಡ, ನಾಗಾಲ್ಯಾಂಡ್, ಅಸ್ಸಾಂ, ಸಿಕ್ಕಿಂ, ತ್ರಿಪುರಾ, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ಆಂಧ್ರಪ್ರದೇಶ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಲಡಾಖ್ ಮತ್ತು ಜಮ್ಮ-ಕಾಶ್ಮೀರ ತಮ್ಮಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಸಾವುಗಳು ಸಂಭವಿಸಿಲ್ಲ ಎಂದು ತಿಳಿಸಿವೆ.
ಕಳೆದ ತಿಂಗಳು ಸಹಾಯಕ ಆರೋಗ್ಯ ಸಚಿವೆ ಭಾರತಿ ಪ್ರವೀಣ ಪವಾರ್ ಅವರು ಕೋವಿಡ್ ಎರಡನೇ ಅಲೆ ಸಂದರ್ಭ ಆಮ್ಲಜನಕದ ಕೊರತೆಯಿಂದ ಯಾವುದೇ ಸಾವುಗಳು ಸಂಭವಿಸಿರುವುದು ವರದಿಯಾಗಿಲ್ಲ ಎಂದು ರಾಜ್ಯಸಭೆಯಲ್ಲಿ ಹೇಳಿದ ಬಳಿಕ ಭಾರೀ ವಿವಾದ ಸೃಷ್ಟಿಯಾಗಿತ್ತು.
ಲೋಕಸಭೆಯಲ್ಲಿ ಸರಕಾರವನ್ನು ಸಮರ್ಥಿಸಿಕೊಂಡಿದ್ದ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು,ಆರೋಗ್ಯವು ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿರುವುದರಿಂದ ಈ ಬಗ್ಗೆ ಮಾಹಿತಿಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒದಗಿಸಬೇಕಾಗುತ್ತದೆ ಎಂದು ಹೇಳಿದ್ದರು.
ಈ ಹೇಳಿಕೆಯು ಭಾರೀ ಪ್ರತಿಭಟನೆಗೆ ನಾಂದಿ ಹಾಡಿದ್ದು,ಆಮ್ಲಜನಕಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿಯ ಮನವಿಗಳು ಮತ್ತು ರೋಗಿಗಳಿಗೆ ಆಮ್ಲಜನಕವನ್ನು ಒದಗಿಸುವ ನಿಟ್ಟಿನಲ್ಲಿ ಹತಾಶ ಆಸ್ಪತ್ರೆಗಳು ದಾಖಲಿಸಿದ್ದ ಪ್ರಕರಣಗಳನ್ನು ಪ್ರತಿಪಕ್ಷಗಳು ಬೆಟ್ಟು ಮಾಡಿವೆ. ದಿಲ್ಲಿ,ಗೋವಾ,ಆಂಧ್ರಪ್ರದೇಶ ಸೇರಿದಂತೆ ವಿವಿಧ ಕಡೆಗಳಲ್ಲಿ ಆಮ್ಲಜನಕದಿಂದ ಕೋವಿಡ್ ರೋಗಿಗಳು ಮೃತಪಟ್ಟಿದ್ದನ್ನು ಅವು ಎತ್ತಿ ತೋರಿಸಿವೆ.







