ಐಎಂಎ ಬಹುಕೋಟಿ ವಂಚನೆ ಪ್ರಕರಣ: ಝಮೀರ್, ಬೇಗ್ ನಿವಾಸಗಳ ಈ.ಡಿ. ದಾಳಿ ಮುಕ್ತಾಯ

ಬೆಂಗಳೂರು, ಆ.6: ಐ ಮಾನಿಟರಿ ಅಡ್ವೈಸರಿ(ಐಎಂಎ) ಬಹುಕೋಟಿ ಹಗರಣ, ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಬಿ.ಝಡ್.ಝಮೀರ್ ಅಹ್ಮದ್ ಖಾನ್ ಹಾಗೂ ಮಾಜಿ ಸಚಿವ ಆರ್.ರೋಷನ್ ಬೇಗ್ ಅವರ ಮನೆ, ಕಚೇರಿ ಸೇರಿ ವಿವಿಧೆಡೆಗಳಲ್ಲಿ ದಿಲ್ಲಿಯ ಜಾರಿ ನಿರ್ದೇಶನಾಲಯ(ಈ.ಡಿ.) ಅಧಿಕಾರಿಗಳು ನಡೆಸಿದ್ದ ದಾಳಿ ಶುಕ್ರವಾರ ಬೆಳಗ್ಗೆ 6ಗಂಟೆಗೆ ಮುಕ್ತಾಯಗೊಂಡಿದೆ.
ಝಮೀರ್ ಅಹ್ಮದ್ ಖಾನ್: ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಬಿ.ಝಡ್.ಝಮೀರ್ ಅಹ್ಮದ್ ಖಾನ್ ಅವರ ಮನೆ, ಕಚೇರಿಗಳ ಮೇಲೆ ಈ.ಡಿ.ಅಧಿಕಾರಿಗಳು ಗುರುವಾರ ಬೆಳಗ್ಗೆ 6ಗಂಟೆಗೆ ದಾಳಿ ಆರಂಭಿಸಿ ಶುಕ್ರವಾರ ಬೆಳಗ್ಗೆ 6ಗಂಟೆಗೆ ಮುಕ್ತಾಯಗೊಳಿಸಿದ್ದು, ದಾಳಿ ವೇಳೆ ಹಲವು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಗುರುವಾರ ಝಮೀರ್ ಅವರ ಮನೆ, ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಯುಬಿ ಸಿಟಿಯಲ್ಲಿನ ಫ್ಲ್ಯಾಟ್, ಆಪ್ತರ ನಿವಾಸಗಳ ಮೇಲೆ ಸಿಆರ್‍ಪಿಎಫ್ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದ ಈ.ಡಿ.ಅಧಿಕಾರಿಗಳ ತಂಡವು ಬಹಳಷ್ಟು ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದ್ದು, ಮುಂದೆ ತಾವು ಕರೆದಾಗ ತಪ್ಪದೇ ವಿಚಾರಣೆಗೆ ಬರಬೇಕೆಂದು ಝಮೀರ್ ಅವರಿಗೆ ತಿಳಿಸಿ ದಾಳಿ ಪೂರ್ಣಗೊಳಿಸಿ ಹೊರ ಹೋಗಿದ್ದಾರೆ.
ಆರ್.ರೋಷನ್ ಬೇಗ್: ಅಕ್ರಮ ಹಣ ವರ್ಗಾವಣೆ, ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಆರ್.ರೋಷನ್ ಬೇಗ್ ಮನೆ ಮೇಲೆ ಈ.ಡಿ. ಅಧಿಕಾರಿಗಳು ದಾಳಿ ನಡೆಸಿ ಸತತ 28 ಗಂಟೆಗಳ ಬಳಿಕ ಪರಿಶೀಲನೆ ಕಾರ್ಯ ಮುಗಿಸಿದ್ದಾರೆ.
ಮಾಜಿ ಸಚಿವ ಆರ್.ರೋಷನ್ ಬೇಗ್ ಮನೆ ಸೇರಿ 6ಕಡೆಗಳಲ್ಲಿ ಗುರುವಾರ ಬೆಳಗ್ಗೆ 6 ಗಂಟೆಗೆ ಆರಂಭಿಸಿದ್ದ ದಾಳಿಯನ್ನು ಅಧಿಕಾರಿಗಳು ಶುಕ್ರವಾರ ಬೆಳಗ್ಗಿನವರೆಗೂ ಮುಂದುವರಿಸಿ, ಬಳಿಕ ಅಗತ್ಯ ದಾಖಲಾತಿಯನ್ನು ವಶಕ್ಕೆ ಪಡೆದುಕೊಂಡು ತೆರಳಿದ್ದಾರೆ.
ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಕುರಿತಾಗಿ ರೋಷನ್ ಬೇಗ್ ಹಾಗೂ ಕುಟುಂಬಸ್ಥರನ್ನು ಈ.ಡಿ.ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಜೊತೆಗೆ ಝಮೀರ್ ಅಹ್ಮದ್ ಖಾನ್ ಜೊತೆಗಿನ ಹಣಕಾಸು ವ್ಯವಹಾರ ಕುರಿತಾಗಿಯೂ ಪ್ರಶ್ನಿಸಿದ್ದಾರೆ.
ಫ್ರೇಜರ್ ಟೌನ್‍ನ ಬೇಗ್ ಮನೆ, ಸಂಜಯನಗರ ಮನೆ, ಭೂಪಸಂದ್ರದ ಮಗಳ ಮನೆ ಹಾಗೂ ಇಂದಿರಾನಗರದಲ್ಲಿನ ಮಗಳ ಮನೆಯಲ್ಲಿಯೂ ದಾಳಿ ನಡೆದಿತ್ತು. ಬೇಗ್‍ಗೆ ಸಂಬಂಧಿಸಿದ ಒಟ್ಟು ನಾಲ್ಕು ಕಡೆಗಳಲ್ಲಿ ಪ್ರತ್ಯೇಕ ತಂಡಗಳಿಂದ ಪರಿಶೀಲನೆ ನಡೆಸಿತ್ತು.
ವಿಚಾರಣೆಗೆ ಸಹಕರಿಸಿದ್ದೇನೆ
ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ ಈ.ಡಿ.ಅಧಿಕಾರಿಗಳ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿ ಸಹಕಾರ ನೀಡಿದ್ದೇನೆ. ಮನಿ ಲಾಂಡ್ರಿಂಗ್ ಇದೆಯೆ ಎಂದು ಕೇಳಿದ್ದರು. ಆದರೆ, ನಾನು ಪ್ರಾಪರ್ಟಿ ಡಾಕ್ಯುಮೆಂಟ್ಸ್ ಕೊಟ್ಟಿದೇವೆ. ಲೋಕಾಯುಕ್ತ, ಐಟಿಗೆ ಹಾಗೂ 2004 ರಿಂದ ಇವರೆಗೆ ಎಲೆಕ್ಷನ್ ಅಫಿಡೆವೆಟ್ಸ್ ಫೈಲ್ ಮಾಡಿರುವುದನ್ನು ಸಹ ವಿಚಾರಿಸಿಕೊಂಡು ಹೋಗಿದ್ದಾರೆ. ಅವರಿಗೆ ಎಲ್ಲ ಮಾಹಿತಿಗಳನ್ನು ಕೊಟ್ಟು ವಿಚಾರಣೆಗೆ ಸಹಕಾರಿಸಿದ್ದೇನೆ.’
-ರೋಷನ್ ಬೇಗ್, ಮಾಜಿ ಸಚಿವ







