ತನ್ನ ಏಕ ಡೋಸ್ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಕೇಂದ್ರದ ಒಪ್ಪಿಗೆ ಕೋರಿದ ಜಾನ್ಸನ್ ಆ್ಯಂಡ್ ಜಾನ್ಸನ್

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಆ.6: ಜಾಗತಿಕ ಔಷಧಿ ತಯಾರಿಕೆ ಸಂಸ್ಥೆ ಜಾನ್ಸನ್ ಆ್ಯಂಡ್ ಜಾನ್ಸನ್ ಭಾರತದಲ್ಲಿ ತನ್ನ ಏಕಡೋಸ್ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಗುರುವಾರ ಕೇಂದ್ರ ಸರಕಾರಕ್ಕೆ ಅರ್ಜಿ ಸಲ್ಲಿಸಿದೆ ಎಂದು ಕಂಪನಿಯ ವಕ್ತಾರರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ತನ್ನ ಏಕಡೋಸ್ ಕೋವಿಡ್ ಲಸಿಕೆಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ತಾನು ಬದ್ಧನಾಗಿದ್ದೇನೆ ಮತ್ತು ಸರಕಾರದೊಡನೆ ಮಾತುಕತೆಗಳನ್ನು ಎದುರು ನೋಡುತ್ತಿದ್ದೇನೆ ಎಂದು ಕಂಪನಿಯು ಸೋಮವಾರ ಹೇಳಿತ್ತು.
ಇದೊಂದು ಮಹತ್ವದ ಮೈಲಿಗಲ್ಲಾಗಿದ್ದು, ಬಯಾಲಜಿಕಲ್ ಇ ಲಿಮಿಟೆಡ್ ಜೊತೆ ಸಹಭಾಗಿತ್ವದೊಂದಿಗೆ ಕಂಪನಿಯ ಏಕಡೋಸ್ ಲಸಿಕೆಯನ್ನು ಭಾರತದ ಮತ್ತು ಇತರ ಜಗತ್ತಿನ ಜನರಿಗಾಗಿ ತರಲು ಅವಕಾಶವನ್ನು ಕಲ್ಪಿಸುತ್ತದೆ ಎಂದು ಜಾನ್ಸನ್ ಆ್ಯಂಡ್ ಜಾನ್ಸನ್ ಇಂಡಿಯಾದ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಬಯಾಲಾಜಿಕಲ್ ಇ ಲಿ. ನಮ್ಮ ಜಾಗತಿಕ ಪೂರೈಕೆ ಜಾಲದ ಮಹತ್ವದ ಭಾಗವಾಗಲಿದ್ದು,ಸರಕಾರಗಳು,ಆರೋಗ್ಯ ಪ್ರಾಧಿಕಾರಗಳು ಹಾಗೂ ಗಾವಿ ಮತ್ತು ಕೋವ್ಯಾಕ್ಸ್ ಫೆಸಿಲಿಟಿಯಂತಹ ಸಂಸ್ಥೆಗಳೊಂದಿಗೆ ನಾವು ಹೊಂದಿರುವ ವ್ಯಾಪಕ ಸಹಭಾಗಿತ್ವಗಳು ಮತ್ತು ಪಾಲುದಾರಿಕೆಗಳ ಮೂಲಕ ಕೋವಿಡ್ ಲಸಿಕೆಯ ಪೂರೈಕೆಗೆ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.
ಲಸಿಕೆಯ ಸಮಗ್ರ ಕ್ಲಿನಿಕಲ್ ಟ್ರಯಲ್ ನಲ್ಲಿ ಅಧ್ಯಯನ ನಡೆಸಲಾದ ಎಲ್ಲ ಪ್ರದೇಶಗಳಲ್ಲಿ ಕೋವಿಡ್ ತಡೆಯುವಲ್ಲಿ ಶೇ.85ರಷ್ಟು ಪರಿಣಾಮಕಾರಿಯಾಗಿದೆ ಎನ್ನುವುದು ಕಂಡು ಬಂದಿದೆ ಮತ್ತು ಲಸಿಕೆ ಪಡೆದುಕೊಂಡ 28 ದಿನಗಳ ಬಳಿಕ ರೋಗದ ವಿರುದ್ಧ ರಕ್ಷಣೆಯನ್ನು ನೀಡುತ್ತದೆ ಎಂದೂ ಹೇಳಿಕೆಯು ತಿಳಿಸಿದೆ.





