ಬಾಲಕಿಗೆ ಲೈಂಗಿಕ ಕಿರುಕುಳ: ಪೊಕ್ಸೋ ಕಾಯ್ದೆಯಡಿ ಆರೋಪಿ ಸೆರೆ

ಅನಂತ ಸೇರೆಗಾರ್
ಉಡುಪಿ, ಆ.6: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವೃದ್ಧನೊಬ್ಬನನ್ನು ಪೊಕ್ಸೋ ಕಾಯಿಡೆಯಡಿ ಪೊಲೀಸರು ಬಂಧಿಸಿದ್ದಾರೆ.
ಅನಂತ ಸೇರೆಗಾರ್(65) ಬಂಧಿತ ಆರೋಪಿ. ಈತ 11 ವರ್ಷ ಪ್ರಾಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಕುರಿತು ಮಕ್ಕಳ ಸಹಾಯ ವಾಣಿಗೆ ಮಾಹಿತಿ ಬಂದಿದ್ದು, ಈ ವಿಚಾರವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ತಿಳಿಸಲಾಯಿತು. ಅದರಂತೆ ತಕ್ಷಣ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಸಮಾಜ ಕಾರ್ಯಕರ್ತರಾದ ಯೋಗೀಶ್ ಮತ್ತು ಸುರಕ್ಷಾ ಜೊತೆ ಬಾಲಕಿಯ ಮನೆಗೆ ಭೇಟಿ ನೀಡಿ ಸಮಾಲೋಚನೆಗೆ ಒಳಪಡಿಸಲಾಯಿತು.
ಈ ಘಟನೆಯ ಬಗ್ಗೆ ಉಡುಪಿಯ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡುವಂತೆ ಪೋಷಕರಿಗೆ ತಿಳಿಸಲಾಯಿತು. ಪೋಷಕರ ದೂರಿನಂತೆ ಮಹಿಳಾ ಠಾಣೆಯಲ್ಲಿ ವೃತ್ತ ನಿರೀಕ್ಷಕರಾದ ಜಯಂತ್ ಎಂ. ಮಾರ್ಗದರ್ಶನದಲ್ಲಿ ಉಪ ನಿರೀಕ್ಷಕಿ ವೈಲೆಟ್ ಫೆಮಿನಾ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಮಹಿಳಾ ಠಾಣಾ ಸಿಬ್ಬಂದಿಗಳಾದ ಅಶೋಕ್ ಮತ್ತು ಜ್ಯೋತಿ ನಾಯಕ್ ಮತ್ತಿತರರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.





