ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಮಹಾರಾಷ್ಟ್ರ ನೀರಾವರಿ ಸಚಿವ ಜಯಂತ್ ಪಾಟೀಲ್

ಬೆಂಗಳೂರು, ಆ.6: ಮಹಾರಾಷ್ಟ್ರ ರಾಜ್ಯದ ನೀರಾವರಿ ಸಚಿವ ಜಯಂತ್ ಪಾಟೀಲ್ ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
ಸಭೆಯ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ಎರಡೂ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣ, ನಿರ್ವಹಣೆ ಮತ್ತು ಮೇಲ್ವಿಚಾರಣೆ ಮಾಡುವ ಕುರಿತು ಚರ್ಚಿಸಲಾಯಿತು. ಉಭಯ ರಾಜ್ಯಗಳ ಜಂಟಿ ಯೋಜನೆಯಾದ ದೂದ್ ಗಂಗಾ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಬಗ್ಗೆಯೂ ಚರ್ಚಿಸಲಾಯಿತು ಎಂದರು.
ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಎರಡೂ ರಾಜ್ಯಗಳು ಅತ್ಯುತ್ತಮವಾಗಿ ಸಮನ್ವಯ ಸಾಧಿಸಿರುವುದಕ್ಕೆ ಜಯಂತ್ ಪಾಟೀಲ್ ಹರ್ಷ ವ್ಯಕ್ತಪಡಿಸಿದರು. ಕೃಷ್ಣಾ ನದಿಗೆ ನೀರು ಹರಿಸುವಾಗ ಸಮನ್ವಯ ಸಾಧಿಸುವ ಕುರಿತು ಚರ್ಚೆ ನಡೆಯಿತು ಎಂದು ತಿಳಿಸಿದ ಮುಖ್ಯಮಂತ್ರಿ, ನೀರಾವರಿಗಾಗಿ ಎರಡೂ ರಾಜ್ಯಗಳ ಮಧ್ಯೆ ಸೌಹಾರ್ದಯುತವಾಗಿ ನೀರು ಹಂಚಿಕೆ ವಿಷಯವನ್ನು ಬಗೆ ಹರಿಸಿಕೊಳ್ಳಲು ನಮ್ಮದು ಮೊದಲ ಆದ್ಯತೆ ಎಂದರು.
ಸಭೆಯಲ್ಲಿ ಸಚಿವರಾದ ಮುರುಗೇಶ್ ನಿರಾಣಿ, ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.







