ಕೇಂದ್ರ ಸರಕಾರ ಪ್ರಜಾಪ್ರಭುತ್ವದ ನಾಲ್ಕು ಕಂಬಗಳನ್ನು ದುರ್ಬಲಗೊಳಿಸಿದೆ: ಸಂಜಯ್ ರಾವತ್

ಮುಂಬೈ, ಆ. 6: ಇಸ್ರೇಲಿ ಸ್ಪೈವೇರ್ ಪೆಗಾಸಸ್ ಅನ್ನು ಬಳಸಿ ಬೇಹುಗಾರಿಕೆ ನಡೆಸುವ ಮೂಲಕ ಮೋದಿ ಸರಕಾರ ಪ್ರಜಾಪ್ರಭುತ್ವದ ನಾಲ್ಕು ಕಂಬಗಳನ್ನು ದುರ್ಬಲಗೊಳಿಸಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಶುಕ್ರವಾರ ಆರೋಪಿಸಿದ್ದಾರೆ.
ದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, ಪೆಗಾಸಸ್ ಪ್ರಕರಣ ಸತ್ಯವಾಗಿದ್ದರೆ ಗಂಭೀರ ವಿಚಾರ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದರೂ ಕೇಂದ್ರ ಸರಕಾರ ಯಾವುದೇ ಗಮನ ಹರಿಸದಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಪೆಗಾಸಸ್ ಸಂಬಂಧಿತ ಬೇಹುಗಾರಿಕೆ ಆರೋಪ ಸತ್ಯವಾಗಿದ್ದರೆ ಗಂಭೀರವಾದುದು ಎಂದು ಗುರುವಾರ ಸುಪ್ರೀಂ ಕೋರ್ಟ್ ಹೇಳಿತ್ತು. ಇಸ್ರೇಲಿ ಸ್ಪೈವೇರ್ ವಿಷಯದ ಕುರಿತು ತನಿಖೆ ನಡೆಸುವಂತೆ ಕೋರಿ ಕ್ರಿಮಿನಲ್ ದೂರು ಸಲ್ಲಿಸಲು ದೂರುದಾರರು ಪ್ರಯತ್ನಿಸಿದ್ದಾರೆಯೇ? ಎಂದು ಅದು ಪ್ರಶ್ನಿಸಿತ್ತು.
‘‘ಕೇಂದ್ರ ಸರಕಾರ ಪೆಗಾಸಸ್ ಸ್ಪೈವೇರ್ನಿಂದ ಬೇಹುಗಾರಿಕೆ ನಡೆಸುವ ಮೂಲಕ ಪ್ರಜಾಪ್ರಭುತ್ವದ ನಾಲ್ಕು ಕಂಬಗಳನ್ನು ದುರ್ಬಲಗೊಳಿಸಿದೆ. ಪೆಗಾಸಸ್ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸುವಂತೆ ಪ್ರತಿಪಕ್ಷಗಳು ಆಗ್ರಹಿಸಿದ್ದವು. ಆದರೆ, ಅದನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ’’ ಎಂದು ಅವರು ತಿಳಿಸಿದ್ದಾರೆ. ಕೇಂದ್ರ ಸರಕಾರ ಪೆಗಾಸಸ್ ಸ್ಪೈವೇರ್ ಹಾಗೂ ರೈತರ ಪ್ರತಿಭಟನೆ ಕುರಿತು ಚರ್ಚಿಸಲು ಬಯಸುತ್ತಿಲ್ಲ ಎಂದು ಅವರು ಹೇಳಿದರು.





