ದ.ಕ.ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿಯಿಂದಲೇ ವಾರಾಂತ್ಯ ಕರ್ಫ್ಯೂ : ಜಿಲ್ಲಾಧಿಕಾರಿ ಡಾ. ರಾಜೇಂದ್ರ
ಮಧ್ಯಾಹ್ನ 2ರವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶವಿದೆ

ಮಂಗಳೂರು, ಆ.6: ದ.ಕ. ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂವನ್ನು ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ವಿಸ್ತರಿಸಲಾಗಿದೆ. ಅಲ್ಲದೆ, ಪ್ರತಿದಿನದ ನೈಟ್ ಕರ್ಫ್ಯೂವನ್ನು ರಾತ್ರಿ 9ರಿಂದ ಬೆಳಗ್ಗೆ 5 ಗಂಟೆವರೆಗೆ ಜಾರಿ ಮಾಡಿ ದ.ಕ. ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಆದೇಶ ಹೊರಡಿಸಿದ್ದಾರೆ.
ಎಲ್ಲ ರೀತಿಯ ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಸಮಾರಂಭಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮದುವೆ ಮತ್ತು ಕೌಟುಂಬಿಕ ಸಮಾರಂಭಗಳನ್ನು 50 ಮಂದಿಯನ್ನು ಮೀರದಂತೆ ನಡೆಸಬೇಕು. ಅಂತ್ಯಸಂಸ್ಕಾರಗಳಲ್ಲಿ ಜನರ ಮಿತಿಯನ್ನು 20ಕ್ಕೆ ಸೀಮಿತಗೊಳಿಸಲಾಗಿದೆ.
ಆ.16ರವರೆಗೆ ಕಟೀಲು ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ದೇವಸ್ಥಾನಗಳು ಭಕ್ತರಿಗೆ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ತೆರೆದಿರುತ್ತದೆ. ಈ ಸಂದರ್ಭದಲ್ಲಿ ಕಡ್ಡಾಯವಾಗಿ ಸುರಕ್ಷಿತ ಅಂತರ, ಕೋವಿಡ್ ಮುಂಜಾಗ್ರತಾ ಕ್ರಮ ಕೈಗೊಂಡು ಭಕ್ತರಿಗೆ ಕೇವಲ ದರ್ಶನಕ್ಕೆ ಅವಕಾಶ ನೀಡಲಾಗಿದೆ. ತೀರ್ಥ ಪ್ರಸಾದ, ಸೇವೆ, ಅನ್ನ ಸಂತರ್ಪಣೆಗೆ ಅವಕಾಶವಿಲ್ಲ. ವಾರಾಂತ್ಯದಲ್ಲಿ ಭಕ್ತರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಅರ್ಚಕರಿಂದ ಸಾಂಪ್ರದಾಯಿಕ ಪೂಜೆಗೆ ಮಾತ್ರ ಅವಕಾಶ ಕಲ್ಪಿಸಿದೆ.
ನೆರೆಯ ಕೇರಳದ ಕಾಸರಗೋಡು ಜಿಲ್ಲೆ ಮತ್ತು ಮಂಗಳೂರು ನಡುವಿನ ಕೆಎಸ್‌ಆರ್‌ಟಿಸಿ ಮತ್ತು ಎಲ್ಲ ಖಾಸಗಿ ಬಸ್‌ಗಳ ಸಂಚಾರವನ್ನು ಆ.16ರವರೆಗೆ ನಿರ್ಬಂಧಿಸಲಾಗಿದೆ. ಕಾಸರಗೋಡಿನಿಂದ ದ.ಕ. ಜಿಲ್ಲೆಗೆ ಉದ್ಯೋಗ, ದಿನಂಪ್ರತಿ ಪ್ರಯಾಣಿಸುವವರು, ಕಾಲೇಜು ವಿದ್ಯಾರ್ಥಿಗಳನ್ನು ಕೋವಿಡ್ ಲಸಿಕೆ ಪಡೆದಿದ್ದರೂ (ಎರಡು ಡೋಸ್ ಆಗಿದ್ದರೂ) ಆರ್‌ಟಿಪಿಸಿಆರ್ ಪರೀಕ್ಷೆಗೆ ನೆಗೆಟಿವ್ ವರದಿಯ ಆಧಾರದಲ್ಲಿ ಏಳು ದಿನಗಳ ಅವಧಿಗೆ ಅನುಮತಿಸಲಾಗುವುದು. ಪ್ರತಿ ಏಳು ದಿನಕ್ಕೊಮ್ಮೆ ಆರ್‌ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕೇರಳ, ಮಹಾರಾಷ್ಟ್ರ ಸಹಿತ ಇತರ ಹೊರರಾಜ್ಯಗಳಿಂದ ವಿದ್ಯಾರ್ಥಿಗಳು ಆರ್‌ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯೊಂದಿಗೆ ಮಂಗಳೂರಿಗೆ ಬಂದ ನಂತರ ಒಂದು ವಾರ ಕಡ್ಡಾಯ ಕ್ವಾರಂಟೈನ್‌ಗೆ ಒಳಪಡಬೇಕು. ಏಳು ದಿನದ ನಂತರ ಮತ್ತೊಮ್ಮೆ ಕೋವಿಡ್ ತಪಾಸಣೆಗೆ ಒಳಪಡತಕ್ಕದ್ದು.
ಆರ್‌ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ತರದೇ ರೈಲು ಮೂಲಕ ಗಡಿ ಪ್ರವೇಶಿಸಿದವರು ರೈಲು ನಿಲ್ದಾಣದಲ್ಲಿ ಕೋವಿಡ್ ತಪಾಸಣೆಗೆ ಒಳಗಾಗಬೇಕು. ತಪಾಸಣೆ ವೇಳೆ ಪಾಸಿಟಿವ್ ಬಂದಲ್ಲಿ/ ವರದಿ ಬರುವವರೆಗೆ ಕೋವಿಡ್ ಕೇರ್ ಸೆಂಟರ್‌ನಲ್ಲಿ ಕ್ವಾರಂಟೈನ್ ಆಗಬೇಕು. ವೈದ್ಯಕೀಯ ತುರ್ತು ಸೇವೆ, ಆ್ಯಂಬುಲೆನ್ಸ್, ಅಂತರ್ ರಾಜ್ಯ ಸರಕು ಸಾಮಗ್ರಿಗಳ ಸಾಗಾಟಕ್ಕೆ ಈ ನಿರ್ಬಂಧವು ಅನ್ವಯಿಸುವುದಿಲ್ಲ.
ಮಧ್ಯಾಹ್ನ 2ರವರೆಗೆ ಅಗತ್ಯ ವಸ್ತು ಖರೀದಿ: ಆಹಾರ, ದಿನಸಿ, ಹಣ್ಣು-ತರಕಾರಿ, ಮೀನು- ಮಾಂಸ, ಹಾಲು, ಪ್ರಾಣಿಗಳ ಆಹಾರ ಮಳಿಗೆಗಳನ್ನು ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ತೆರೆಯಲು ಅವಕಾಶವಿದೆ. ಅದೇ ರೀತಿ ಬೀದಿಬದಿ ವ್ಯಾಪಾರಸ್ಥರು, ನ್ಯಾಯಬೆಲೆ ಅಂಗಡಿ, ಮದ್ಯ ಮಳಿಗೆಗಳು (ಪಾರ್ಸೆಲ್‌ಗೆ ಮಾತ್ರ) ಕೂಡ ಬೆಳಗ್ಗೆ 5ರಿಂದ ಮಧ್ಯಾಹ್ನ 2 ಗಂಟೆವರೆಗೆ ತೆರೆಯಲು ಅನುಮತಿಸಲಾಗಿದೆ. ಆಹಾರ ಹೋಮ್ ಡೆಲಿವರಿ ವ್ಯವಸ್ಥೆಯನ್ನು ದಿನದ 24 ಗಂಟೆಯೂ ನಡೆಸಬಹುದಾಗಿದೆ.
ಎಲ್ಲ ಕೇಂದ್ರ ಮತ್ತು ರಾಜ್ಯ ಸರಕಾರಿ ಕಚೇರಿಗಳು ಹಾಗೂ ಅವುಗಳ ಸ್ವಾಯತ್ತ ಸಂಸ್ಥೆಗಳ ಕಚೇರಿಗಳು ತೆರೆದಿರಲಿವೆ. ಅಗತ್ಯ ಸೇವೆಗಳನ್ನು ಒದಗಿಸುವ ಕೈಗಾರಿಕೆಗಳು, ಕಂಪೆನಿಗಳು, ಸಂಸ್ಥೆಗಳು ದಿನವಿಡಿ ತೆರೆಯಲು ಅನುಮತಿಸಲಾಗಿದೆ. ಈ ಸಂಸ್ಥೆಗಳ ಸಿಬ್ಬಂದಿ ಕಚೇರಿ ಐಟಿ ಕಾರ್ಡ್ ತೋರಿಸಿ ಸಂಚರಿಸಬಹುದು. ಟೆಲಿಕಾಂ, ಇಂಟರ್ನೆಟ್ ಸರ್ವಿಸ್ ಪ್ರೊವೈಡರ್‌ಗಳ ಸಿಬ್ಬಂದಿ ತಮ್ಮ ಐಡಿ ಕಾರ್ಡ್ ತೋರಿಸಿ ಸಂಚರಿಸಬಹುದು. ಐಟಿ ಕಂಪೆನಿಗಳ ಅವಶ್ಯಕ ಸಿಬ್ಬಂದಿ ಮಾತ್ರ ಸಂಚರಿಸಲು ಅವಕಾಶ, ಉಳಿದವರು ಮನೆಯಿಂದಲೇ ಕೆಲಸ ನಿರ್ವಹಿಸಬಹುದು. ಬಸ್ ಸಂಚಾರಕ್ಕೆ ತಡೆ ಇಲ್ಲ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.







