ಪಕ್ಷನಿಷ್ಠೆಯ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಕೊಡಿ: ಮುಖಂಡರ ಮನವಿ
`ಮಾದಿಗರಿಗೆ(ಎಡಗೈ) ಕಾರ್ಯಾಧ್ಯಕ್ಷ ಸ್ಥಾನ ನೀಡಿ'

ಬೆಂಗಳೂರು, ಆ. 6: ರಾಜ್ಯದಲ್ಲಿ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿರುವ ಹಾಗೂ ಬಹುತೇಕ ವಿಧಾನಸಭೆ, ಲೋಕಸಭಾ ಕ್ಷೇತ್ರದಲ್ಲಿ ನಿರ್ಣಾಯಕರಾಗಿರುವ ಮಾದಿಗ ಸಮುದಾಯಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಸ್ಥಾನ ಹಾಗೂ ಪದಾಧಿಕಾರಿಗಳ ನೇಮಕಾತಿಯಲ್ಲಿ ಹೆಚ್ಚು ಪ್ರಾತಿನಿಧ್ಯತೆ ನೀಡಬೇಕೆಂದು ಮಾದಿಗ ಸಮುದಾಯದ ಮುಖಂಡರ ನಿಯೋಗ ಕಾಂಗ್ರೆಸ್ ವರಿಷ್ಟರಲ್ಲಿ ಮನವಿ ಮಾಡಿದೆ.
ಇತ್ತೀಚೆಗೆ ರಾಜ್ಯದಿಂದ ದಿಲ್ಲಿಗೆ ತೆರಳಿದ್ದ ರಾಜ್ಯಸಭೆ ಸದಸ್ಯ ಡಾ.ಎಲ್.ಹನುಮಂತಯ್ಯ, ರಾಜ್ಯಸಭೆಯ ಮಾಜಿ ಸದಸ್ಯ ಕೆ.ಬಿ.ಕೃಷ್ಣಮೂರ್ತಿ, ಮಾಜಿ ಸಚಿವರಾದ ಎಚ್.ಆಂಜನೇಯ, ಆರ್.ಬಿ.ತಿಮ್ಮಾಪುರ ನೇತೃತ್ವದ ನಿಯೋಗ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಈ ವೇಳೆ ಮಾತನಾಡಿದ ನಿಯೋಗದಲ್ಲಿದ್ದ ಮುಖಂಡರು, ರಾಜ್ಯದಲ್ಲಿ ಮಾದಿಗ ಸಮುದಾಯ ದೊಡ್ಡ ಸಂಖ್ಯೆಯಲ್ಲಿದ್ದು, ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಕಾಂಗ್ರೆಸ್ ಪಕ್ಷ ಬಹಳಷ್ಟು ರಾಜಕೀಯ ಪ್ರಾತಿನಿಧ್ಯ, ವಿಶೇಷ ಯೋಜನೆಗಳು ಜಾರಿಗೊಳಿಸಿದೆ. ಈ ಮಧ್ಯೆ ಕೋಮು ಪಕ್ಷಗಳು ವಿವಿಧ ರೀತಿ ತಪ್ಪು ಸಂದೇಶ ರವಾನಿಸಿ ಸಮುದಾಯದ ಮತ ಸೆಳೆಯಲು ಯತ್ನಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಸಮುದಾಯದ ನಾಯಕರಿಗೆ ಕೆಪಿಸಿಸಿಯಲ್ಲಿ ಕಾರ್ಯಾಧ್ಯಕ್ಷ ಸ್ಥಾನ ಹಾಗೂ ಪದಾಧಿಕಾರಿಗಳ ನೇಮಕಾತಿಯಲ್ಲಿ ಹೆಚ್ಚು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಅಸ್ಪೃಶ್ಯ ವರ್ಗದಲ್ಲಿ ಮೊದಲ ಸಾಲಿನಲ್ಲಿರುವ ಮಾದಿಗ ಸಮುದಾಯ ಬಹಳಷ್ಟು ನೋವುಂಡ ಸಮುದಾಯ ಆಗಿದೆ. ಈ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದ ಮೇಲೆ ಅದಮ್ಯ ವಿಶ್ವಾಸ, ನಂಬಿಕೆ ಇದ್ದು, ಅದನ್ನು ಮುಂದುವರಿಸಿಕೊಂಡು ಹೋಗಲು ರಾಜಕೀಯ ಪ್ರಾತಿನಿಧ್ಯ ನೀಡುವುದು ಬಹಳ ಅಗತ್ಯವಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು. ಇತ್ತೀಚೆಗೆ ಸಮುಯದಾಯದ ಯುವಕರಿಗೆ ವಿವಿಧ ರೀತಿ ಆಮಿಷವೊಡ್ಡಿ ಕೋಮುವಾದಿ ಪಕ್ಷ ತನ್ನಡೆಗೆ ಸೆಳೆಯುವ ಪ್ತಯತ್ನ ನಡೆಸುತ್ತಿದೆ.
ಆದರೂ ಸಮುದಾಯದ ಶೇ.95ರಷ್ಟು ಮಂದಿ ಕಾಂಗ್ರೆಸ್ ನಿಷ್ಠೆ ಕೈಬಿಟ್ಟಿಲ್ಲ. ಆದುದರಿಂದ ಸಮುದಾಯದ ಬದ್ಧತೆ ಗುರುತಿಸಿ ಹಾಗೂ ಬರುವ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ಸಹಕಾರಿ ಆಗುವ ರೀತಿ ಸಾಮಾಜಿಕ ನ್ಯಾಯದಡಿ ಸಮುದಾಯಕ್ಕೆ ಪಕ್ಷದ ಪ್ರಮುಖ ಹುದ್ದೆಗಳಲ್ಲಿ ಸ್ಥಾನ ಕಲ್ಪಿಸಬೇಕು ಎಂದು ನಿಯೋಗ, ವರಿಷ್ಠರಿಗೆ ಇದೇ ವೇಳೆ ಮನವಿ ಮಾಡಿದರು.







