ಕಡಲ್ಕೊರೆತ ಭೀತಿ ಇದ್ದಲ್ಲಿ ಮನೆ ಸ್ಥಳಾಂತರ: ಸಚಿವ ಎಸ್.ಅಂಗಾರ
![ಕಡಲ್ಕೊರೆತ ಭೀತಿ ಇದ್ದಲ್ಲಿ ಮನೆ ಸ್ಥಳಾಂತರ: ಸಚಿವ ಎಸ್.ಅಂಗಾರ ಕಡಲ್ಕೊರೆತ ಭೀತಿ ಇದ್ದಲ್ಲಿ ಮನೆ ಸ್ಥಳಾಂತರ: ಸಚಿವ ಎಸ್.ಅಂಗಾರ](/images/placeholder.jpg)
ಮಂಗಳೂರು, ಆ.6: ಕಡಲ ತೀರದಲ್ಲಿ ವಾಸಿಸುವ ಕುಟುಂಬಗಳಿಗೆ ಕಡಲ್ಕೊರೆತದ ಭೀತಿ ಇದ್ದಲ್ಲಿ ಅಂತಹ ಮನೆಗಳನ್ನು ಬೇರೆಡೆಗೆ ಸ್ಥಳಾಂತರಿ ಸಬೇಕು ಎಂದು ಸಚಿವ ಎಸ್.ಅಂಗಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೋವಿಡ್ ಹಾಗೂ ನೆರೆ ಹಾವಳಿ ಪರಿಹಾರ ಕಾರ್ಯಗಳ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಡಲ ತೀರದಿಂದ ಸ್ಥಳಾಂತರಗೊಂಡವರಿಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಾಣ ಮಾಡಿಕೊಡುವ ಕೆಲಸವನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಬೇಕು ಎಂದರು.
ಮಳೆಯಿಂದಾಗಿ ಹಾಳಾಗಿರುವ ರಸ್ತೆಯ ಕಾಮಗಾರಿಗಳನ್ನು ಕುರಿತಂತೆ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಅಧಿಕಾರಿಗಳು ಕ್ರಮ ಕೈಗೊಳ್ಳ ಬೇಕು. ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ಸರಕಾರ ಘೋಷಿಸಿರುವ 10 ಸಾವಿರ ರೂ. ಪರಿಹಾರ ಮೊತ್ತವನ್ನು ಶೀಘ್ರವಾಗಿ ಮತ್ತು ಕಡ್ಡಾಯವಾಗಿ ಆಯಾ ಕುಟುಂಬಗಳಿಗೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ನೆರೆಯಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ತೊಂದರೆಯಾಗಿಲ್ಲ, ಏಪ್ರಿಲ್ 1ರಿಂದ ಆಗಸ್ಟ್ 8 ರವರೆಗೆ ಒಟ್ಟು 86 ಮನೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, 490 ಮನೆಗಳು ಭಾಗಶಃ ಹನಿಯಾಗಿವೆ. ನೆರೆಯಿಂದಾಗಿ ಕೃಷಿ ವಲಯಗಳಿಗೆ ಹಾಗೂ ಪ್ರಾಣಿಗಳಿಗೆ ಯಾವುದೇ ಹಾನಿ ಉಂಟಾಗಿಲ್ಲ. ವಿದ್ಯುತ್ ಅವಘಡಗಳು ಸಂಭವಿಸಿಲ್ಲ ಎಂದರು.