ಚಿಕ್ಕಮಗಳೂರು: ಮಗು ನಾಪತ್ತೆ; 40 ನಿಮಿಷದಲ್ಲಿ ಪತ್ತೆ ಹಚ್ಚಿದ ತುರ್ತು ಸೇವಾ ಸಿಬ್ಬಂದಿ

ಚಿಕ್ಕಮಗಳೂರು, ಆ.6: ನಗರದ ಎಂ.ಜಿ ರಸ್ತೆಯಲ್ಲಿ ದಿಢೀರ್ ನಾಪತ್ತೆಯಾಗಿದ್ದ 5 ವರ್ಷ ಹೆಣ್ಣು ಮಗುವೊಂದನ್ನು ತುರ್ತು ಸೇವಾ (112) ಸಿಬ್ಬಂದಿ ಕೇವಲ 40 ನಿಮಿಷಗಳಲ್ಲಿ ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನದ ವೇಳೆ ನಗರದ ಎಂ.ಜಿ ರಸ್ತೆ ನಿವಾಸಿಯಾಗಿರುವ ದಂಪತಿಯ 5 ವರ್ಷದ ಹೆಣ್ಣು ಮಗು ಮನೆ ಬಳಿ ಇದ್ದ ವೇಳೆ ನಾಪತ್ತೆಯಾಗಿತ್ತು. ಕೂಡಲೇ ಮಗುವಿನ ತಾಯಿ ಪೊಲೀಸರಿಗೆ ಕರೆ ಮಾಡಿದ್ದು, ಸ್ಥಳಕ್ಕೆ ಬಂದ 112 ವಾಹನದ ಎಮರ್ಜೆನ್ಸಿ ರೆಸ್ಪಾನ್ಸ್‍ನ ಸಿಬ್ಬಂದಿ ಮಗುವಿನ ಚಹರೆಯ ಮಾಹಿತಿ, ಫೋಟೊ ಪಡೆದು ಪತ್ತೆಗೆ ಮುಂದಾಗಿದ್ದಾರೆ. ಈ ವೇಳೆ ವಾಹನದ ಧ್ವನಿ ವರ್ಧಕದ ಮೂಲಕ ಎಲ್ಲಡೆ ಮಾಹಿತಿ ನೀಡಿದ್ದು, ಸಂಬಂದಿಸಿದ ಪೊಲೀಸ್ ಠಾಣೆಗಳಿಗೂ ಮಾಹಿತಿ ರವಾನಿಸಲಾಗಿತ್ತು.
ಮಗುವಿನ ಪತ್ತೆಗೆ ಹುಡಕಾಟ ನಡೆಸುತ್ತಿದ್ದ ವೇಳೆ ನಗರದ ಹೊಸಮನೆ ಬಡಾವಣೆಯಲ್ಲಿ ಮಗು ಇರುವುದನ್ನು ಪತ್ತೆ ಹಚ್ಚಿದ ಪೊಲೀಸರ ತಂಡ ಮಗುವನ್ನು ಹೆತ್ತವರಿಗೆ ಒಪ್ಪಿಸಿದ್ದಾರೆಂದು ತಿಳಿದು ಬಂದಿದೆ.
112 ಸಿಬ್ಬಂದಿ ಮಗು ನಾಪತ್ತೆಯಾಗಿ ಕೇವಲ 40 ನಿಮಿಷದಲ್ಲಿ ಪತ್ತೆ ಹಚ್ಚಿದ್ದು, ಪತ್ತೆ ಕಾರ್ಯದಲ್ಲಿದ್ದ ಸಿಬ್ಬಂದಿ ಮಲ್ಲೇಶಪ್ಪ, ದರ್ಶನ್, ಬಸವರಾಜು ಅವರನ್ನು ಎಸ್ಪಿ ಅಕ್ಷಯ್ ಎಂ.ಎಚ್.ಅಬಿನಂಧಿಸಿದ್ದು, ಸಾರ್ವಜನಿಕರು ಇಂತಹ ತುರ್ತು ಸಂದರ್ಭಗಳಲ್ಲಿ 112 ಸಹಾಯವಾಣಿಗೆ ಕರೆ ಮಾಡುವ ಮೂಲಕ ಪೊಲೀಸ್ ಇಲಾಖೆಯ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.







