ವೈವಾಹಿಕ ಅತ್ಯಾಚಾರವು ವಿಚ್ಛೇದನ ಕೋರಲು ಉತ್ತಮ ಕಾರಣ: ಕೇರಳ ಹೈಕೋರ್ಟ್

ಕೊಚ್ಚಿ,ಆ.6: ವಿವಾಹ ವಿಚ್ಛೇದನ ಪ್ರಕರಣಗಳಲ್ಲಿ ದೂರಗಾಮಿ ಪರಿಣಾಮಗಳನ್ನು ಬೀರಬಹುದಾದ ಮಹತ್ವದ ತೀರ್ಪೊಂದರಲ್ಲಿ ಕೇರಳ ಉಚ್ಚ ನ್ಯಾಯಾಲಯವು,ಪತ್ನಿಯ ಇಚ್ಛೆಗೆ ವಿರುದ್ಧವಾಗಿ ನಡೆಸುವ ಲೈಂಗಿಕ ಕ್ರಿಯೆಯು ವೈವಾಹಿಕ ಅತ್ಯಾಚಾರವಾಗುತ್ತದೆ ಮತ್ತು ಇದು ವಿಚ್ಛೇದನವನ್ನು ಕೋರಲು ಉತ್ತಮ ಕಾರಣವಾಗಬಲ್ಲದು ಎಂದು ಹೇಳಿದೆ.
ಕ್ರೌರ್ಯದ ಆಧಾರದಲ್ಲಿ ವಿವಾಹ ವಿಚ್ಛೇದನವನ್ನು ಮಂಜೂರು ಮಾಡಿದ್ದ ಕುಟುಂಬ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ಎ.ಮುಹಮ್ಮದ್ ಮುಸ್ತಾಕ್ ಮತ್ತು ಕೆ.ಎಡಪ್ಪಗತ್ ಅವರ ವಿಭಾಗೀಯ ಪೀಠವು,ದಾಂಪತ್ಯ ಹಕ್ಕುಗಳ ಮರುಸ್ಥಾಪನೆಯನ್ನು ಕೋರಿದ್ದ ಅರ್ಜಿಯನ್ನೂ ವಜಾಗೊಳಿಸಿತು.
ವೈವಾಹಿಕ ಜೀವನದಲ್ಲಿ ಪತ್ನಿಯ ಸ್ವಾಯತ್ತೆಯನ್ನು ಕಡೆಗಣಿಸಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸುವುದು ವೈವಾಹಿಕ ಅತ್ಯಾಚಾರಕ್ಕೆ ಸಮನಾಗುತ್ತದೆ. ಇಂತಹ ನಡವಳಿಕೆಗೆ ದಂಡನೆ ಸಾಧ್ಯವಿಲ್ಲದಿದ್ದರೂ ಇದು ದೈಹಿಕ ಮತ್ತು ಮಾನಸಿಕ ಕ್ರೌರ್ಯದ ಚೌಕಟ್ಟಿನಲ್ಲಿ ಸೇರುತ್ತದೆ. ಕಾನೂನು ವೈವಾಹಿಕ ಅತ್ಯಾಚಾರವನ್ನು ದಂಡನೀಯವೆಂದು ಪರಿಗಣಿಸಿಲ್ಲ ಎಂಬ ಮಾತ್ರಕ್ಕೇ ಅದು ವಿಚ್ಛೇದನವನ್ನು ಮಂಜೂರು ಮಾಡಲು ಕ್ರೌರ್ಯದ ಒಂದು ರೂಪವೆಂದು ನ್ಯಾಯಾಲಯವು ಪರಿಗಣಿಸುವುದನ್ನು ಪ್ರತಿಬಂಧಿಸುವುದಿಲ್ಲ. ಹೀಗಾಗಿ ವೈವಾಹಿಕ ಅತ್ಯಾಚಾರವು ವಿಚ್ಛೇದನವನ್ನು ಕೋರಲು ಉತ್ತಮ ಕಾರಣವಾಗಿದೆ ಎಂದು ಪೀಠವು ಹೇಳಿತು.





