15ರ ಹರೆಯದಲ್ಲಿ ಬಂಧಿತನಾಗಿದ್ದ ವ್ಯಕ್ತಿಗೆ ಮರಣದಂಡನೆ: ಆ್ಯಮ್ನೆಸ್ಟಿ ಖಂಡನೆ
ಲಂಡನ್,ಆ.7: ಇರಾನ್‌ನಲ್ಲಿ ಹದಿನೈದು ವರ್ಷದವನಾಗಿದ್ದಾಗ ಬಂಧಿಸಲ್ಪಟ್ಟಿದ್ದ ಬಾಲಕನೊಬ್ಬನಿಗೆ ಮರಣದಂಡನೆ ನೀಡಿರುವುದು ಮಕ್ಕಳ ಹಕ್ಕುಗಳ ಮೇಲಾದ ಕ್ರೂರವಾದ ಹಲ್ಲೆಯಾಗಿದೆ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಆಕ್ರೋಶ ವ್ಯಕ್ತಪಡಿಸಿದೆ. ಇರಾನ್‌ನಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮರಣದಂಡನೆಗಳನ್ನು ಜಾರಿಗೊಳಿಸುವ ಸಾಧ್ಯತೆ ಗಳಿವೆಯೆಂದು ಅದು ಆತಂಕ ವ್ಯಕ್ತಪಡಿಸಿದೆ.
2010ರ ಆಗಸ್ಟ್‌ನಲ್ಲಿ ವ್ಯಕ್ತಿಯೊಬ್ಬನಿಗೆ ಇರಿದಿದ್ದರಿಂದ ಆತ ಮೃತಪಟ್ಟ ಘಟನೆಗೆ ಸಂಬಂಧಿಸಿ ಸಜಾದ್ ಸಂಜಾರಿ ಎಂಬ 15ರ ಹರೆಯದ ಬಾಲಕನನ್ನು ಬಂಧಿಸಲಾಗಿತ್ತು. ವ್ಯಕ್ತಿಯು ತನ್ನ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದಾಗ ಆತ್ಮರಕ್ಷಣೆಗಾಗಿ ತಾನು ಆತನನ್ನು ಇರಿದಿದ್ದೆನೆಂದು ಸಜಾದ್ ತಿಳಿಸಿದ್ದ. ಆದರೆ 2012ರಲ್ಲಿ ನ್ಯಾಯಾಲಯವು ಕೊಲೆ ಆರೋಪಕ್ಕೆ ಸಂಬಂಧಿಸಿ ಆತನನ್ನು ದೋಷಿಯೆಂದು ತೀರ್ಪು ನೀಡಿತ್ತು ಹಾಗೂ ಆತನಿಗೆ ಮರಣದಂಡನೆ ಘೋಷಿಸಿತ್ತು.
ಸಂಜಾರಿಯನ್ನು ಸೋಮವಾರ ಅತ್ಯಂತ ರಹಸ್ಯವಾಗಿ ಗಲ್ಲಿಗೇರಿಸಲಾಯಿತು. ಮೃತದೇಹವನ್ನು ಪಡೆದು ಕೊಳ್ಳುವಂತೆ ಜೈಲು ಅಧಿಕಾರಿಯು ತಿಳಿಸಿದ ಬಳಿಕವಷ್ಟೇ ಕುಟುಂಬಿಕರಿಗೆ ಸಂಜಾರಿಯನ್ನು ಗಲ್ಲಿಗೇರಿಸಿರುವುದು ತಿಳಿಯಿತೆನ್ನಲಾಗಿದೆ.
ಸಂಜಾರಿಯನ್ನು ರಹಸ್ಯವಾಗಿ ಹತ್ಯೆಗೈಯುವ ಮೂಲಕ ಇರಾನ್‌ನ ಅಧಿಕಾರಿಗಳು ಅವರ ಬಾಲ ನ್ಯಾಯ ವ್ಯವಸ್ಥೆಯ ಕ್ರೌರ್ಯವನ್ನು ತೋರಿಸಿಕೊಟ್ಟಿದ್ದಾರೆಂದು,ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಮಧ್ಯಪ್ರಾಚ್ಯ ಹಾಗೂ ಉತ್ತರ ಆಫ್ರಿಕಕ್ಕಾಗಿನ ನಿದೇಶಕಿ ಡಯಾನಾ ಎಲ್ಟಾಹಾವೈ ತಿಳಿಸಿದ್ದಾರೆ.





