ಮೈಸೂರು: ಪತಿಯಿಂದ ಯುವತಿಯ ಅತ್ಯಾಚಾರ: ಪತ್ನಿಯ ದೂರು, ಅತ್ಯಾಚಾರ ನಡೆದಿಲ್ಲ ಎಂದು ಯುವತಿಯ ಸ್ಪಷ್ಟನೆ
ಮೈಸೂರು, ಆ.6: ಮೈಸೂರು ವಿಶ್ವವಿದ್ಯಾನಿಲಯಲದಲ್ಲಿ ಪ್ರಾಧ್ಯಪಕರಾಗಿರುವ ನನ್ನ ಪತಿ ಪಿಎಚ್‌ಡಿ ಸಂಶೋಧನೆ ಮಾಡುತ್ತಿದ್ದ ಯುವತಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಪತಿ-ಪತ್ನಿ ಜಗಳದಲ್ಲಿ ನನ್ನ ಎಳೆತರಲಾಗಿದೆ. ನನ್ನ ಮೇಲೆ ಯಾರೂ ಅತ್ಯಾಚಾರ ನಡೆಸಿಲ್ಲ ಎಂದು ಯುವತಿ ಹೇಳಿಕೆ ನೀಡಿದ್ದಾರೆ.
ಇದೀಗ ಪ್ರಕರಣವು ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯ ಮೆಟ್ಟಲೇರಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಪ್ರಾಧ್ಯಾಪಕರ ಪತ್ನಿ, ಗುರುವಾರ ಮಧ್ಯಾಹ್ನ ನಾನು ಸ್ಟಡಿ ಮೆಟೀರಿಯಲ್ ತರಲೆಂದು ಮನೆಗೆ ತೆರಳಿದ್ದೆ. ಈ ವೇಳೆ ಮನೆಯಲ್ಲಿ ಯುವತಿಯ ಚೀರಾಟ ಕೇಳಿಬಂತು. ನಾನು ಕೂಡಲೇ ಮನೆಯ ಒಳಗೆ ತೆರಳಿದಾಗ ಓಡಿ ಬಂದ ಯುವತಿಯು ನನ್ನ ಕಾಲನ್ನು ಹಿಡಿದು ಕಾಪಾಡುವಂತೆ ಬೇಡಿಕೊಂಡಳು. ನಿಮ್ಮ ಪತಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಹೇಳಿದಳು. ಕೂಡಲೇ ಅಕೆಯನ್ನು ಸಂತೈಸಿದ ನಾನು ಆಕೆಯಿಂದ ದೂರು ಪತ್ರ ಬರೆಸಿ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದರು.
ಈ ಸಂಬಂಧ ಪೊಲೀಸರು ಠಾಣೆಗೆ ಪ್ರಾಧ್ಯಾಪಕರನ್ನು ಕರೆಸಿ ಮಾಹಿತಿ ಪಡೆದಿದ್ದಾರೆ. ಪತಿ, ಪತ್ನಿಯರ ಜಗಳದಲ್ಲಿ ವಿನಾಕಾರಣ ನನ್ನನ್ನು ಬಳಸಿಕೊಳ್ಳಲಾಗಿದೆ. ದೂರು ಪತ್ರಕ್ಕೆ ಬಲವಂತವಾಗಿ ನನ್ನ ಹೆಬ್ಬೆಟ್ಟನ್ನು ಒತ್ತಿಸಲಾಗಿದೆ. ಸಹಿ ಮಾಡದಷ್ಟು ನಾನು ಅನಕ್ಷರಸ್ಥೆಯಲ್ಲ ಎಂದು ಯುವತಿ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಗ್ಗೆ ಪ್ರಾಧ್ಯಾಪಕರ ಪತ್ನಿಯು, ತನ್ನ ಪತಿಯ ಬಗ್ಗೆ ಯಾವುದೇ ದೂರು ದಾಖಲಿಸಿಲ್ಲ. ಯುವತಿ ಕೂಡ ದೂರು ಕೊಡಲು ನಿರಾಕರಿಸುತ್ತಿದ್ದಾಳೆ ಎಂದು ಹೇಳಿದ್ದಾರೆ.







