ಬೆಂಗಳೂರು: ನಬರನ್ ಚೆಕ್ಮಾ ಗ್ಯಾಂಗ್ ಸೆರೆ: 6 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ

ಬೆಂಗಳೂರು, ಆ.6: ಕುಖ್ಯಾತ ಡ್ರಗ್ ಪೆಡ್ಲರ್ ನಬರನ್ ಚೆಕ್ಮಾ ಗ್ಯಾಂಗನ್ನು ಭೇದಿಸಿ 6 ಕೋಟಿ ರೂ. ಮೌಲ್ಯದ ಡ್ರಗ್ಸ್‍ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ತಿಳಿಸಿದ್ದಾರೆ.
ಅಸ್ಸಾಂ ಮೂಲದ ನಬರನ್ ಚೆಕ್ಮಾ ಹಾಗೂ ಆತನ ಸಹಚರರಾದ ಮೋಬಿನ್‍ಬಾಬು ರೊಲಾಂಡ್‍ರೋಡ್ನಿ ರೋಜರ್ ಮತ್ತು ತರುಣ್‍ಕುಮಾರ್ ಲಾಲ್‍ಚಂದ್ ಬಂಧಿತ ಗ್ಯಾಂಗ್‍ನ ಆರೋಪಿಗಳಾಗಿದ್ದಾರೆ ಎಂದು ಕಮಲ್ ಪಂತ್ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತ ಆರೋಪಿಗಳಿಂದ 6 ಕೋಟಿ ರೂ. ಮೌಲ್ಯದ 15 ಕೆಜಿ ಆಶಿಶ್ ಎಣ್ಣೆ, 11 ಕೆಜಿ ಗಾಂಜಾ, 530 ಗ್ರಾಂ ಸೆರೆಸ್ ಉಂಡೆ, 4 ಹೈಡ್ರೊ ಗಾಂಜಾ ಸಸಿಗಳು, ಮೊಬೈಲ್‍ಗಳು, ಕಾರು, ಬೈಕ್ ಹಾಗೂ ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅಸ್ಸಾಂ ಮೂಲದ ನಬರನ್ ಚೆಕ್ಮಾ ಮಾದಕ ವಸ್ತುಗಳ ಮಾರಾಟ ಮಾಡಿ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ನಗರದ ಅಪಾರ್ಟ್‍ಮೆಂಟ್‍ಗಳನ್ನು ಬದಲಿಸುತ್ತ ವಾಸ ಮಾಡುತ್ತಿದ್ದ. ಚೆಕ್ಮಾ ಕಳೆದ 3 ವರ್ಷಗಳಿಂದ ತನ್ನ ಸಹಚರರೊಂದಿಗೆ ಗ್ಯಾಂಗ್ ಕಟ್ಟಿಕೊಂಡು ನಗರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿ ಕಂಪೆನಿಗಳ ಟೆಕ್ಕಿಗಳಿಗೆ ಆಶೀಶ್ ಎಣ್ಣೆ, ಗಾಂಜಾವನ್ನು ಮಾರಾಟ ಮಾಡುತ್ತಿದ್ದ.
ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯಾಧರಿಸಿ ಕಾರ್ಯಾಚರಣೆ ಕೈಗೊಂಡ ಸಿಸಿಬಿ ಅಧಿಕಾರಿಗಳು ಚೆಕ್ಮಾ ಸೇರಿ ನಾಲ್ವರ ಗ್ಯಾಂಗ್‍ನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ತಿಳಿಸಿದರು.







