ಜಮ್ಮು-ಕಾಶ್ಮೀರ: ಎನ್ಕೌಂಟರ್ ನಲ್ಲಿ ಇಬ್ಬರು ಶಂಕಿತ ಉಗ್ರರ ಸಾವು
ಜಮ್ಮು, ಆ. 6: ಜಮ್ಮು ಹಾಗೂ ಕಾಶ್ಮೀರದ ರಾಜೌರಿ ಜಿಲ್ಲೆಯ ತಾನಮಂಡಿ ಪ್ರದೇಶದಲ್ಲಿ ಭದ್ರತಾ ಪಡೆ ಶುಕ್ರವಾರ ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ಶಂಕಿತ ಉಗ್ರರು ಹತರಾಗಿದ್ದಾರೆ.
ಈ ಪ್ರದೇಶಕ್ಕೆ ಹೊಸತಾಗಿ ಒಳನುಸುಳಿದ ಉಗ್ರರ ಚಲನವಲನದ ಬಗ್ಗೆ ಮಾಹಿತಿ ಸ್ವೀಕರಿಸಿದ ಬಳಿಕ ಗುರುವಾರ ರಾತ್ರಿ ತಾನಮಂಡಿಯಲ್ಲಿ ಭದ್ರತಾ ಪಡೆ ಹಾಗೂ ಭಾರತೀಯ ಸೇನೆ ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸಿತು. ಈ ಸಂದರ್ಭ ಕೆಲವು ಉಗ್ರರು ಗುಂಡು ಹಾರಿಸಿದರು. ಈ ಹಿನ್ನೆಲೆಯಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯಿತು. ಈ ಸಂದರ್ಭ ಭದ್ರತಾ ಪಡೆ ಇಬ್ಬರು ಉಗ್ರರನ್ನು ಹತ್ಯೆಗೈದಿತು.
ಎನ್ಕೌಂಟರ್ ನಡೆದ ರಾಜೌರಿಯ ಗಡಿ ನಿಯಂತ್ರಣ ರೇಖೆಯ ಸಮೀಪ ಟಾರ್ಚ್ ಹಾಗೂ ರೇಡಿಯೋ ಸೇರಿದಂತೆ ಕೆಲವು ವಸ್ತುಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಹೆಚ್ಚಿನ ಪಡೆಗಳು ಧಾವಿಸಿವೆ. ಒಟ್ಟು ನಾಲ್ವರು ಉಗ್ರರಿದ್ದರು. ಇಬ್ಬರು ವಿದೇಶಿ ಉಗ್ರರು. ಅವರು ಕಾಶ್ಮೀರದಿಂದ ಈ ಭಾಗಕ್ಕೆ ಬಂದಿರಬೇಕು ಎಂದು ಜಮ್ಮು ವಲಯದ ಪೊಲೀಸ್ ಹೆಚ್ಚುವರಿ ನಿರ್ದೇಶಕ (ಎಡಿಜಿಪಿ) ಮುಖೇಶ್ ಸಿಂಗ್ ಹೇಳಿದ್ದಾರೆ.





